

ಮಡಿಕೇರಿ:
ಭದ್ರತೆ ಕಲ್ಪಿಸುವ ದೃಷ್ಟಿಯಿಂದ ಸೂಕ್ಷ್ಮ, ಅತಿಸೂಕ್ಷ್ಮ, ನಕ್ಸಲ್ ಪೀಡಿತ ಹೀಗೆ ಮತಗಟ್ಟೆಗಳನ್ನು ವಗೀಕರಣ ಮಾಡುವುದು ಸಾಮಾನ್ಯ. ಆದರೆ ಮತಗಟ್ಟೆಗೆ ಮತದಾರರನ್ನು ಸೆಳೆಯಲು ಕೂಡ ಮತಗಟ್ಟೆಗಳನ್ನು ವರ್ಗೀಕರಿಸಲಾಗುತ್ತದೆ. ಕೊಡಗಿನಲ್ಲಿ ಈಗಾಗಲೇ ಅಲಂಕಾರಿಕ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಸ್ಥಳೀಯ ಸಂಸ್ಕೃತಿ ಪರಿಕಲ್ಪನೆಗೆ ಅನುಗುಣವಾಗಿ ಅವುಗಳನ್ನು ಅಲಂಕರಿಸುವ ಮೂಲಕ ವಿಶೇಷ ಆದ್ಯತೆ ನೀಡಲಾಗಿದೆ.
ಮಲೆನಾಡಿನ ಸೆರಗಿನಲ್ಲಿ ಇರುವ ಕೊಡಗಿನಲ್ಲಿ ಆನೆ ಮಾನವ ಸಂಘರ್ಷ ಹೊಸದೇನಲ್ಲ. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಹಾಡಹಗಲೇ ರಸ್ತೆಗಳಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗುವುದೂ ಸಾಮಾನ್ಯ. ಹಾಗಾಗಿ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸೂಕ್ಷತ್ಮ, ಅತಿಸೂಕ್ಷ್ಮ ಹಾಗೂ ನಕ್ಷಲ್ ಪೀಡಿತ ಮತಗಟ್ಟೆಗಳ ಜೊತೆಗೆ ಕಾಡಾನೆ ಹಾವಳಿ ಇರುವ ಮತಗಟ್ಟೆಗಳನ್ನು ಮೊದಲ ಬಾರಿಗೆ ಜಿಲ್ಲೆಯಲ್ಲಿ ಗುರುತಿಸಲಾಗಿತ್ತು.
ನಂತರ ಗ್ರಾಮ ಪಂಚಾಯಿತಿ ಚುನಾವಣೆ ಸಮಯದಲ್ಲೂ ಇಂತಹ ಮತಗಟ್ಟೆಗಳನ್ನು ಗುರುತಿಸಿ ಆನೆ ಹಾವಳಿ ಪ್ರದೇಶಗಳಲ್ಲಿ ಮತದಾನಕ್ಕೆ ತೆರಳಲು ಮತದಾರರಲ್ಲಿ ನಿರ್ಮಾಣ ಆಗಬಹುದಾದ ಭಯದ ವಾತಾವರಣ ನಿರ್ಮೂಲನೆ, ಮತಗಟ್ಟೆಗಳಿಗೆ ನಿಯೋಜಿತರಾಗಿರುವ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಸುರಕ್ಷತೆಯ ಹಿನ್ನೆಲೆಯಲ್ಲಿ ಈ ರೀತಿ ಮತಗಟ್ಟೆಗಳನ್ನು ಗುರುತಿಸಿ ಅಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಇಂತಹ ವಿಶೇಷತೆಗಳನ್ನು ಅಳವಡಿಸುವ ಮೂಲಕ ಸುರಕ್ಷಿತ ಮತ್ತು ಗರಿಷ್ಟ ಪ್ರಮಾಣದ ಮತದಾನಕ್ಕೆ ಶ್ರಮಿಸುವಲ್ಲಿ ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ ಕೊಡಗಿನಲ್ಲಿ ಸದಾ ಮುಂದಿರುತ್ತದೆ. ಹೊಸತನಗಳನ್ನು ಅಳವಡಿಸುವುದರೊಂದಿಗೆ ರಾಜ್ಯಕ್ಕೆ ಮಾದರಿ ಆಗುವ ರೀತಿಯಲ್ಲಿ ಸ್ವೀಪ್ ಸಮಿತಿ ಕಾರ್ಯನಿರ್ವಹಿಸುತ್ತಿರುತ್ತದೆ. ಸ್ಥಳೀಯ ಸಂಘ ಸಂಸ್ಥೆಗಳು, ಕಲಾವಿದರು, ಪ್ರತಿಭೆಗಳು ಕೂಡ ಜಿಲ್ಲಾಡಳಿತದ ಜೊತೆ ಕೈ ಜೋಡಿಸುವುದರಿಂದ ಇಲ್ಲಿ ನಡೆಯುವ ಪ್ರಯೋಗಗಳಲ್ಲಿ ನಾವಿನ್ಯತೆಯನ್ನು ಕಾಣಬಹುದಾಗಿದೆ. ಎಲ್ಲ ಪ್ರಯತ್ನಗಳ ಒಟ್ಟಾರೆ ಗುರಿ ಜಿಲ್ಲೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವುದೇ ಆಗಿರುವುದರಿಂದ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆಯೂ ಕಂಡುಬರುತ್ತಿದೆ. ಇದೀಗ ಈ ಸಾಲಿಗೆ ಅಲಂಕಾರಿಕ ಮತಗಟ್ಟೆಗಳೂ ಸೇರಿದೆ.
ಪ್ರಾರಂಭಿಕವಾಗಿ ಜಿಲ್ಲೆಯಲ್ಲಿ ಮೂರು ಅಲಂಕಾರಿಕ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಅಗತ್ಯತೆಗಳನ್ನು ಗಮನಿಸಿಕೊಂಡು ಮತ್ತಷ್ಟು ಕಡೆಗಳಲ್ಲಿ ಇಂತಹ ಅಲಂಕಾರಿಕ ಮತಗಟ್ಟೆಗಳನ್ನು ರಚಿಸುವ ಯೋಜನೆಯನ್ನು ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ ಹೊಂದಿದೆ ಜಿಲ್ಲೆಯ ಪ್ರಸಿದ್ಧ ಕಲಾವಿದರು ಈ ಯೋಜನೆಗೆ ಕೈ ಜೋಡಿಸಿರುವುದರಿಂದ ಅಲಂಕಾರಿಕ ಮತಗಟ್ಟೆಗಳು ಯೋಚನೆ ಮಾಡಿದ್ದಕ್ಕಿಂತ ಸುಂದರವಾಗಿ ಮೂಡಿ ಬಂದಿದ್ದು ಇನ್ನಷ್ಟು ಕಡೆಗಳಲ್ಲಿ ಇಂತಹ ಅಲಂಕಾರಿಕ ಮತಗಟ್ಟೆಗಳನ್ನು ತೆರೆಯಲು ಸ್ವೀಪ್ ಸಮಿತಿಗೆ ಸ್ಫೂರ್ತಿ ನೀಡಿದೆ.
ಮಡಿಕೇರಿ ತಾಲೂಕಿನಲ್ಲಿ ಮಡಿಕೇರಿ ನಗರದ ಎ.ವಿ. ಶಾಲೆ ಮತಗಟ್ಟೆಯನ್ನು ಅಲಂಕಾರಿಕ ಮತಗಟ್ಟೆಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಕಾಫಿ ನಾಡು ಎಂದು ಗುರುತಿಸಿಕೊಂಡಿರುವ ಕೊಡಗಿನ ಕಾಫಿ ವೈಶಿಷ್ಟ್ಯ ಬಿಂಬಿಸುವ ಕಾಫಿ ಕಂಪಿನ ಚಿತ್ತಾರವನ್ನು ಈ ಮತಗಟ್ಟೆಯಲ್ಲಿ ಅರಳಿಸಲಾಗಿದೆ. ಮತದಾನದ ಮಹತ್ವ ಮತ್ತು ಜಾಗೃತಿ ಮೂಡಿಸುವ ಬರಹಗಳೊಂದಿಗೆ ಈ ಮತಗಟ್ಟೆ ಇತರ ಮತಗಟ್ಟೆಗಳಿಗಿಂತ ವಿಭಿನ್ನವಾಗಿ ಕಂಡುಬರುತ್ತದೆ.
ಕುಶಾಲನಗರ ತಾಲೂಕಿನಲ್ಲಿ ರಂಗಸಮುದ್ರ ಗ್ರಾಮದ ಪ್ರೌಢಶಾಲೆ ಮತಗಟ್ಟೆಯನ್ನು ಅಲಂಕಾರಿಕ ಮತಗಟ್ಟೆಯನ್ನಾಗಿ ರೂಪಿಸಲಾಗಿದೆ. ಪ್ರಸಿದ್ಧ ಪ್ರವಾಸಿ ತಾಣ ದುಬಾರೆ ಬಳಿ ಇರುವ ಈ ಮತಗಟ್ಟೆಗೆ ವನ್ಯ ಜೀವಿಗಳ ಪರಿಕಲ್ಪನೆಯನ್ನು ಬಳಸಿಕೊಳ್ಳಲಾಗಿದೆ. ಕಾಡಿನ ನಾಡು ಕೊಡಗಿನ ವನ್ಯ ಜೀವಿ ಸಂಪತ್ತನ್ನು ಬಿಂಬಿಸುವ ಚಿತ್ರಗಳು ಈ ಮತಗಟ್ಟೆಯ ಆಕರ್ಷಣೆಯಾಗಿದೆ. ಇಲ್ಲಿಯೂ ಮತದಾನದ ಮಹತ್ವ ಹೇಳುವ ಬರಹಗಳು ಕಂಡುಬರುತ್ತದೆ.
ಪೊನ್ನಂಪೇಟೆ ತಾಲೂಕಿನಲ್ಲಿ ತಿತಿಮತಿ ಪ್ರೌಢಶಾಲೆ ಮತಗಟ್ಟೆ ಅಲಂಕಾರಿಕ ಮತಗಟ್ಟೆಯಾಗಿ ಆಯ್ಕೆಯಾಗಿದೆ. ಕಾಡಿನ ಮಕ್ಕಳ ವಿಭಿನ್ನ ಬದುಕು ಬಿಂಬಿಸುವ ಚಿತ್ರಕಲೆಗಳ ಸೊಬಗನ್ನು ಇಲ್ಲಿಯ ಗೋಡೆಗಳ ಮೇಲೆ ಮೂಡಿಸಲಾಗಿದ್ದು, ಆದಿವಾಸಿಗಳ ಜೀವನ ಶೈಲಿಯ ಚಿತ್ರ ಚಿತ್ತಾರವನ್ನು ಈ ಮತಗಟ್ಟೆಯಲ್ಲಿ ಕಾಣಬಹುದು.
ಜಿಲ್ಲೆಯ ಪ್ರಖ್ಯಾತ ಕಲಾವಿದರಾದ ಉ.ರಾ. ನಾಗೇಶ್, ಬಸವರಾಜ ಬಡಿಗೇರ್ ಹಾಗೂ ಬಿ.ಆರ್. ಸತೀಶ್ ನೇತೃತ್ವದಲ್ಲಿ ರಾಜು ಮಾನೆ, ಪರಶುರಾಮ, ಮಂಜುನಾಥ್, ಇಂದ್ರಾಣಿ, ಕರಿಯಪ್ಪ, ಸದಾನಂದ ಪುರೋಹಿತ್ ಈ ಬಣ್ಣದ ಲೋಕ ಅರಳಿಸುವಲ್ಲಿ ಶ್ರಮಿಸಿದ್ದಾರೆ. ಇವರೆಲ್ಲರೂ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿರುವುದು ಇಲ್ಲಿಯ ವಿಶೇಷ. ಚುನಾವಣೆ ಸಂದರ್ಭದ ಮತಹಬ್ಬವನ್ನು ವರ್ಣರಂಜಿತಗೊಳಿಸಲು ಈ ಕಲಾವಿದರು ತಮ್ಮ ಪ್ರತಿಭೆಯನ್ನು ಇಲ್ಲಿ ಧಾರೆ ಎರೆದಿದ್ದಾರೆ. ಮತಗಟ್ಟೆಗಳಲ್ಲಿ ಇದು ಹೊಸ ಪರಿಕಲ್ಪನೆಯಾಗಿದೆ. ಸಖಿ ಬೂತ್, ಯೂತ್ ಬೂತ್‌ಗಳ ಆರಂಭಕ್ಕೂ ಜಿಲ್ಲಾಡಳಿತ ಚಿಂತನೆ ನಡೆದಿದೆ.