

ಮೈಸೂರು: ಗ್ಯಾರಂಟಿ ಯೋಜನೆಗಳೆ ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆ ಆಗಿದ್ದು ಕಾರ್ಯಕರ್ತರು ಶ್ರಮವಹಿಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಶಾಸಕ ಕೆ.ಹರೀಶ್‌ಗೌಡ ಮನವಿ ಮಾಡಿದರು.
ಹೆಬ್ಬಾಳಿನ ಲೋಕನಾಯಕ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬೂತ್ ಮಟ್ಟದ ಸಭೆಯಲ್ಲಿ ಅವರು ಮತಯಾಚನೆ ಮಾಡಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡುವುದರ ಮೂಲಕ ಎಲ್ಲ ವರ್ಗದವರನ್ನು ಮೇಲೆತ್ತುವ ಕೆಲಸ ಮಾಡಿದೆ. ಈ ಗ್ಯಾರಂಟಿ ಯೋಜನೆಗಳೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಲಿದೆ ಎಂದರು.
ರಾಜ್ಯ ಸರ್ಕಾರದ ಸಾಧನೆಗಳನ್ನು ಕ್ಷೇತ್ರದ ಮತದಾರರ ಮನೆ ಮನೆಗೆ ಹೋಗಿ ತಿಳಿಸುವುದರ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಮತ ನೀಡುವುದರೊಂದಿಗೆ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.
ಮಾಜಿ ಮೇಯರ್ ಬಿ.ಕೆ.ಪ್ರಕಾಶ್, ಇಂದಿರಾಗಾಂಧಿ ಬ್ಲಾಕ್ ಅಧ್ಯಕ್ಷ ಮಂಚೇಗೌಡನಕೊಪ್ಪಲು ರವಿ, ನಗರಪಾಲಿಕೆ ಮಾಜಿ ಸದಸ್ಯ ಶ್ರೀನಿವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ಮುಖಂಡರಾದ ಭಾಸ್ಕರ್‌ಗೌಡ, ಎನ್.ಎಸ್.ಗೋಪಿನಾಥ್, ಕೇಬಲ್ ಮಹೇಶ್, ವಾರ್ಡ್ ಅಧ್ಯಕ್ಷ ನಾಗರಾಜು, ಮಾಜಿ ಸಿಂಡಿಕೇಟ್ ಸದಸ್ಯ ಗೋಪಿನಾಥ್, ವಾರ್ಡ್ ಮಹಿಳಾ ಅಧ್ಯಕ್ಷೆ ಕಮಲಮ್ಮ ಇತರರು ಇದ್ದರು.