ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ವರದಾನ, ಎಂಎಲ್‌ಸಿ ಎಂಟಿಬಿ ನಾಗರಾಜ್ ಸ್ಪಷ್ಟನೆ, ಎ.ರಂಗನಾಥಪುರದಲ್ಲಿ ಪ್ರತಿಭಾ ಪುರಸ್ಕಾರ

IMG-20200927-WA0224
Published on

ಬೆಂಗಳೂರು ಗ್ರಾಮಾಂತರ: ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಿಂದ ಹಣ ವಸೂಲಿ ಮತ್ತಿತರ ಅಕ್ರಮಗಳಿಗೆ ಕಡಿವಾಣ ಬೀಳಲಿದೆ, ರೈತರಿಗೆ ವರದಾನವಾಗಲಿರುವ ಈ ತಿದ್ದುಪಡಿ ಬಗ್ಗೆ ಕಾಂಗ್ರೆಸ್ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.

ದೇವನಹಳ್ಳಿ ತಾಲೂಕು ಎ.ರಂಗನಾಥಪುರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಪದಾಧಿಕಾರಿಗಳ ಸಮಾವೇಶ, ಪ್ರತಿಭಾ ಪುರಸ್ಕಾರ, ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಪಿಎಂಸಿ ಕಾಯ್ದೆ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಸಮಸ್ಯೆಯಾಗುವುದಿಲ್ಲ. ಈ ತಿದ್ದುಪಡಿಯಿಂದ ಯಾರೂ ಬೇಕಾದರೂ ಕೃಷಿ ಮಾಡಬಹುದು, ಹಾಗೆಯೇ ಕೈಗಾರಿಕೆ ಅಗತ್ಯವೂ ಇದೆ, ಕೃಷಿ ಇಲ್ಲದ ಭೂಮಿಯಲ್ಲಿ ಕೈಗಾರಿಕೋದ್ಯಮ ಬೆಳೆದರೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶ್ರಮಿಸುತ್ತಿರುವ ಸರ್ಕಾರಕ್ಕೆ ಈ ಕಾಯ್ದೆ ತಿದ್ದುಪಡಿ ಸಹಕಾರಿಯಾಗಲಿದೆ, ಕೈಗಾರಿಕೋದ್ಯಮಿಗಳು ತಾವು ಖರೀದಿಸಿದ ಜಮೀನಿನಲ್ಲಿ ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಆ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ, ಉದ್ಯೋಗ ಹೆಚ್ಚುವುದರಿಂದ ಗ್ರಾಮಮಟ್ಟದಿಂದ ಜಿಲ್ಲಾಮಟ್ಟದವರೆಗೆ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದರು. ಈ ಬಗ್ಗೆ ವಿರೋಧ ಮಾಡುವವರು ಅವಲೋಕಿಸಬೇಕು, ರೈತರು ಅವಶ್ಯಕತೆ ಇದ್ದರಷ್ಟೆ ಜಮೀನು ಮಾರಾಟ ಮಾಡಬಹುದೇ ಹೊರತು ಒತ್ತಾಯಪೂರ್ವಕವಾಗಿ ಸ್ವಾಧೀನಪಡಿಸಿಕೊಂಡು ಉದ್ದಿಮೆದಾರರಿಗೆ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುವುದು ತಪ್ಪುತ್ತದೆ, ಈ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ವರದಾನವಾಗಲಿದೆ ಎಂದರು.

ಸ್ವಾಂತಂತ್ರ್ಯ ಬಂದು 70 ವರ್ಷ ಕಳೆದರೂ ದೇವನಹಳ್ಳಿ ತಾಲೂಕು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ, ಮುಂದಿನ ಗ್ರಾಪಂ ಚುನಾವಣೆಯಲ್ಲಿ ಯಾರೂ ಪ್ರಾಮಾಣಿಕವಾಗಿ ಜನಸೇವೆ ಮಾಡುವರೋ ಅಂಥವರನ್ನು ಆಯ್ಕೆ ಮಾಡಬೇಕು ಎಂದರು.

ಎಂ.ಟಿ.ಬಿ.ನಾಗರಾಜು ಅವರಿಗೆ ಸಚಿವಸ್ಥಾನ ಸಿಕ್ಕು ಜಿಲ್ಲಾ ಉಸ್ತುವಾರಿ ಸಚಿವರಾದರೆ ದೇವನಹಳ್ಳಿ ತಾಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದಾರೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಸಂಘಟಿಸಿ ಅಧಿಕಾರ ಹಿಡಿಯಲು ಸಹಾಯವಾಗುತ್ತದೆ ಎಂದು ರಾಜ್ಯ ರೈತಮೋರ್ಚಾ ಮಾಜಿ ಉಪಾಧ್ಯಕ್ಷ ಎಂ.ನಾರಾಯಣಗೌಡ ಹೇಳಿದರು.

ಮಾಜಿ ಶಾಸಕ ಜಿ.ಚಂದ್ರಣ್ಣ ಚಂದ್ರಪ್ಪ, ಜಿಲ್ಲಾ ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ರವಿಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಸುನಿಲ್ ಸುಂದರೇಶ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ನೀಲೇರಿ ಮಂಜುನಾಥ್, ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಮೋಹನ್, ಬಿಜೆಪಿ ಒಬಿಸಿ ತಾಲೂಕು ಅಧ್ಯಕ್ಷ ಸುಜಿತ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net