

ಚಿತ್ರದುರ್ಗ: ಬಗರ್‌ಹುಕುಂ,ಕಾಯ್ದಿಟ್ಟ ಅರಣ್ಯ ಹಾಗೂ ಕಂದಾಯ ಭೂಮಿ ಸಾಗುವಳಿ ಮಾಡುತ್ತಿರುವ ಬಡವರನ್ನು ಒಕ್ಕಲೆಬ್ಬಿಸಬಾರದೆಂದು ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಿದ್ದನಗೌಡ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ,ಬಡ ಸಾಗುವಳಿದಾರರನ್ನು ಒಕ್ಕಲೆಬ್ಬಿಸ ಬಾರದು ಹಾಗೂ ಭೂಮಿ ಇಲ್ಲದ ಬಡವರಿಗೆ ತಲಾ ಎರಡು ಎಕರೆ ಜಮೀನು ಕೊಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ಕಂದಾಯ ಮಂತ್ರಿ ಬಳಿ ನಿಯೋಗ ಹೋಗುತ್ತೇವೆ. ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪದಿದ್ದಲ್ಲಿ ಬೆಂಗಳೂರಲ್ಲಿ ಧರಣಿ ನಡೆಸಿ ನಂತರ ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು.
ರಾಜ್ಯದಲ್ಲಿ ಅತಿವೃಷ್ಠಿಯಿಂದ ಬೆಳೆ ನಾಶವಾಗಿದೆ. ಆದ್ದರಿಂದ ಪ್ರತಿ ಎಕರೆಗೆ 30 ಸಾವಿರ ರೂ.ತಾತ್ಕಾಲಿಕ ಪರಿಹಾರ ನೀಡಬೇಕೆಂದರು. ಪಂಪ್‌ಸೆಟ್‌ಗೆ ಮೀಟರ್ ಅಳವಡಿಸಲು ಬಿಡುವುದಿಲ್ಲ ಎಂದರು. ಕೆಲವರು ವೈಯಕ್ತಿಕ ಹಿತಕ್ಕಾಗಿ ರಾಜ್ಯ ರೈತ ಸಂಘವನ್ನು ಅನೇಕ ಹೋಳು ಮಾಡಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಗೌರವಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ ಕೆಲವರ ದುರಾಸೆ,ದುರಭಿಮಾನದಿಂದ ರೈತ ಸಂಘಟನೆಗಳು ಛಿದ್ರ ಛಿದ್ರವಾಗುತ್ತಿವೆ ಎಂದರು. ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಟರಮಣಪ್ಪ,ಎಂ.ಸಿದ್ದಪ್ಪ, ಕುರುಬರಹಳ್ಳಿ ಜಿ.ಎಸ್.ಶಿವಣ್ಣ, ಜೆ.ಮೇಘರಾಜ್ ಹಳಿಯೂರು,ಎನ್.ಜಿ.ಷಣ್ಮುಖಪ್ಪ,ಮರುಳಸಿದ್ದಪ್ಪ,ಜಿ.ಪರಮೇಶ್ವರಪ್ಪ, ಗೌಡ್ರು ಪರಮಶಿವಣ್ಣ, ಎನ್.ವೀರಣ್ಣ,ಶಿವಕುಮಾರ್,ಸತೀಶ್,ಮುಜಿಬುಲ್ಲಾ,ಹುಣಸೂರಿನ ಲಿಂಗಮ್ಮ ಮತ್ತಿತರರು ಇದ್ದರು.
(ಸಿಟಿಡಿ 23 ರೈತ)
ಚಿತ್ರದುರ್ಗದಲ್ಲಿ ಶುಕ್ರವಾರ ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಿದ್ದನಗೌಡ ಅವರ ನೇತೃತ್ವದಲ್ಲಿ ಪದಾಧಿಕಾರಿಗಳ ಸಭೆ ನಡೆ ಯಿತು. ಸೋಮಗುದ್ದು ರಂಗಸ್ವಾಮಿ,ವೆಂಕಟರಮಣಪ್ಪ, ಎಂ.ಸಿದ್ದಪ್ಪ,ಹುಣಸೂರಿನ ಲಿಂಗಮ್ಮ ಇತರರು ಇದ್ದರು.
---