ಧಾರ್ಮಿಕ ಕೇಂದ್ರಗಳಲ್ಲಿ ನಡೆಯಲಿ ಶಿಬಿರ : ಪ್ರಸಾದ್ ರೈ ಕಳಕಳಿ

New Project (27)
Published on

ಉಳ್ಳಾಲ: ನಾಮ ಹಲವಾದರೂ ದೇವನೊಬ್ಬನೇ. ಪೂಜೆಯ ರೀತಿ ಮಾತ್ರ ವಿಭಿನ್ನ. ಮಸೀದಿಯಲ್ಲಿ ನಡೆಯುತ್ತಿರುವ ರಕ್ತದಾನ ಶಿಬಿರ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ನಡೆದಾಗ ಅರ್ಥ ಬರುತ್ತದೆ ಎಂದು ಉಳ್ಳಾಲ ಸದ್ಭಾವನಾ ವೇದಿಕೆಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಅಭಿಪ್ರಾಯಪಟ್ಟರು.

ಉಳ್ಳಾಲ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್, ಸದ್ಭಾವನಾ ವೇದಿಕೆ, ಪೊಸಕುರಲ್ ವಾಹಿನಿ, ಜಮಾಅತೇ ಇಸ್ಲಾಮಿ ಹಿಂದ್‌ನ ಸೋಶಿಯಲ್ ಸರ್ವೀಸ್ ಯೂನಿಟ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಹಾಗೂ ಯೇನಪೊಯ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ತೊಕ್ಕೊಟ್ಟು ಮಸ್ಜಿದುಲ್ ಹುದಾದಲ್ಲಿ ಸೌಹಾರ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪೊಸಕುರಲ್ ಆಡಳಿತ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಮಾತನಾಡಿ, ಕರೊನಾ ಬಳಿಕ ರಕ್ತದ ಕೊರತೆ ಸಾಕಷ್ಟಿದೆ. ಕೆಲವೊಮ್ಮೆ ರಕ್ತ ಬ್ಯಾಂಕ್‌ನಲ್ಲಿ ಅಗತ್ಯಕ್ಕೆ ರಕ್ತ ಸಿಗದ ಕಾರಣ ಕೆಲವು ಯುವಕರು ರಕ್ತ ಕೊಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ಮಸ್ಜಿದುಲ್ ಹುದಾ ಖತೀಬ್ ಮಹಮ್ಮದ್ ಕುಂಞಿ, ಅಧ್ಯಕ್ಷ ಎ.ಎಚ್.ಮೆಹಮೂದ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಅಧ್ಯಕ್ಷ ನಝೀರ್ ಹುಸೈನ್, ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ಕ್ಷೇತ್ರಾಧ್ಯಕ್ಷ ಜೆ.ಬಿ.ಹುಸೈನ್, ಅಬ್ದುಲ್ ಮಜೀದ್ ಮೊದಲಾದವರು ಉಪಸ್ಥಿತರಿದ್ದರು.

ಸೋಶಿಯಲ್ ಸರ್ವೀಸ್ ವಿಭಾಗದ ಇಸಾಕ್ ಹಸನ್ ಸ್ವಾಗತಿಸಿದರು. ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಅಧ್ಯಕ್ಷ ಯೂಸುಫ್ ಅಸ್ಲಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಝಾಮ್ ತೊಕ್ಕೊಟ್ಟು ವಂದಿಸಿದರು. ಮುಝಮ್ಮಿಲ್ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರಿನಲ್ಲಿ ಸಂಗ್ರಹ ಆಗುವಷ್ಟು ರಕ್ತ ಕರ್ನಾಟಕದ ಯಾವುದೇ ಭಾಗದಲ್ಲೂ ಆಗುತ್ತಿಲ್ಲ. ಆದರೆ ಮಂಗಳೂರಿನಲ್ಲಿರುವ ಆಸ್ಪತ್ರೆಗಳಿಗೆ ಹೊರ ಜಿಲ್ಲೆಗಳ ರೋಗಿಗಳೂ ಬರುವುದರಿಂದ ಎಷ್ಟು ರಕ್ತ ಸಂಗ್ರಹ ಆದರೂ ಸಾಕಾಗುತ್ತಿಲ್ಲ. ಕೆಲವೊಮ್ಮೆ ಅಗತ್ಯವಿರುವ ಗುಂಪಿನ ರಕ್ತವೇ ಸಿಗುತ್ತಿಲ್ಲ. ನಝೀರ್ ಹುಸೈನ್ ಅಧ್ಯಕ್ಷ, ಬ್ಲಡ್ ಹೆಲ್ಪ್ ಕೇರ್ https://www.vijayavani.net/cleanliness-campaign-in-kukke-area https://www.vijayavani.net/talamaddale-3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net