

ಬೆಳಗಾವಿ : ಸಾಧನೆ ಎನ್ನುವುದು ಶ್ರಮದಿಂದಲೇ ಲಭಿಸುತ್ತದೆಯೇ ಹೊರತು ಅದಕ್ಕೆ ವಾಮವಾರ್ಗಗಳಿಲ್ಲ. ಓದು ವಿಸ್ತಾರವಾಗಿ ಅಂತರಂಗ-ಬಹಿರಂಗಗಳು ಒಂದಾಗಿದ್ದರೆ ಮಾತ್ರ ಮನಸ್ಸನ್ನು ತಿಳಿಗೊಳಿಸುವ ಕೃತಿಗಳು ಸೃಷ್ಟಿಯಾಗಬಲ್ಲದು ಎಂದು ಹಿರಿಯ ಸಾಹಿತಿ ಶಿರೀಷ ಜೋಶಿ ಅಭಿಪ್ರಾಯಪಟ್ಟರು.
ಇಲ್ಲಿನ ಬಿ. ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಗರದಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ನಾಗೇಶ ನಾಯಕ ಅವರ ‘ಕಾಡುವ ಕವಿತೆಗಳು’ ವಿಮರ್ಶಾ ಬರೆಹಗಳ ಸಂಕಲನವನ್ನು ಹಿರಿಯ ಸಾಹಿತಿ ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕಾಡುವ ಕವಿತೆಗಳನ್ನು ಹುಡುಕುವ ಮತ್ತು ಅದರ ಬಗ್ಗೆ ಬರೆಯುವುದು ಸಣ್ಣ ಕೆಲಸವಲ್ಲ. ನಾಗೇಶ ನಾಯಕರು ಮಾಡಿರುವ ಕಾರ್ಯ ಸಾಹಿತ್ಯಿಕವಾಗಿ ಮಹತ್ವ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕೃತಿ ಪರಿಚಯ ಮಾಡಿದ ಕವಯಿತ್ರಿ ಡಾ. ನಿರ್ಮಲ ಬಟ್ಟಲ ಅವರು, ಹಿರಿಯ ಕವಿಗಳಿಂದ ಹಿಡಿದು ಹೊಸ ತಲೆಮಾರಿನ ಕವಿಗಳ ಕವಿತೆಗಳನ್ನು ವಿಮರ್ಶಿಸಿದ ಪರಿಯನ್ನು ಗಮನಿಸಿದರೆ ನಾಗೇಶ ನಾಯಕರ ಓದಿನ ವ್ಯಾಪ್ತಿ ಬೆರಗು ಹುಟ್ಟಿಸುತ್ತದೆ. ಓದುಗರ ಮನಸ್ಸನ್ನು ಗೆಲ್ಲಲು ಹತ್ತಾರು ಕೃತಿಗಳನ್ನು ರಚಿಸಬೇಕಾಗಿಲ್ಲ, ಒಂದೇ ಒಂದು ಗಟ್ಟಿ ಕವಿತೆ ಅಥವಾ ಬರೆಹ ಕವಿಯೊಬ್ಬನನ್ನು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಬಹುದಾಗಿದೆ. ಕಾಡುವ ಕವಿತೆ ಸಂಕಲನ ಅಂತಹ ಸಾಲಿಗೆ ಸೇರುವಂಥದ್ದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎ. ಎ. ಸನದಿ ಮಾತನಾಡಿ ಸಂಕಲನದಲ್ಲಿ ವಿಮರ್ಷಿಸಲ್ಪಟ್ಟ ಐವತ್ತೂ ಕವಿತೆಗಳು ಬೆರಗು ಹುಟ್ಟುಸುವಂತಿವೆ. ನಾಗೇಶ ನಾಯಕ ಕಾಡುವ ಕವಿತೆಗಳ ವಿಮರ್ಶೆಯನ್ನು ನಿಲ್ಲಿಸದೇ ಮುಂದುವರೆಸಬೇಕೆಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಪ್ರಶಸ್ತಿ ಪಡೆದ ಬಸವರಾಜ ಗಾರ್ಗಿಯವರನ್ನು ಸನ್ಮಾನಿಸಲಾಯಿತು. ಕೃತಿಕಾರ ನಾಗೇಶ ನಾಯಕ, ವಿಠ್ಠಲ ತಡಸಲನೂರ, ಬಸವರಾಜ ಗೌಡಪ್ಪ, ಮಲ್ಲಿಕಾರ್ಜುನ ಛಬ್ಬಿ, ನದೀಮ ಸನದಿ, ಸುನಂದ ಮುಳೆ, ಅಕಬರ ಸನದಿ, ಸಿದ್ದಣ್ಣ ಕುರುಬರ, ಮದನ ಕಣಬೂರ, ಮಾಲಾ ಅಕ್ಕಿಶೆಟ್ಟಿ, ಪ್ರೊ. ಇಂದಿರಾ ಹೋಳ್ಕರ್ ಸೇರಿದಂತೆ ಇತರರಿದ್ದರು. ಕವಯಿತ್ರಿ ಆಶಾ ಯಮಕನಮರಡಿ ನಿರೂಪಿಸಿದರು. ಆರ್.ಬಿ. ಬನಶಂಕರಿ ವಂದಿಸಿದರು.