ದಸರಾ ಮಹೋತ್ಸವದಲ್ಲಿ 96 ಲಕ್ಷ ರೂ. ಮೌಲ್ಯದ ಪುಸ್ತಕ ಮಾರಾಟ: ಮಾನಸ

Published on

ಮೈಸೂರು: ದಸರಾ ಹಿನ್ನೆಲೆಯಲ್ಲಿ ನಗರದ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳದಲ್ಲಿ ಒಟ್ಟು 96 ಲಕ್ಷ ರೂ. ಮೌಲ್ಯದ ಪುಸ್ತಕ ಮಾರಾಟವಾಗಿವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ .ಮಾನಸ ತಿಳಿಸಿದರು.

ವಿವಿಧ ಪ್ರಕಾಶಕರು, ನಾನಾ ಅಕಾಡೆಮಿಗಳು, ವಿವಿಧ ಪ್ರಾಧಿಕಾರಗಳು, ವಿಶ್ವ ವಿದ್ಯಾಲಯಗಳು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಒಟ್ಟು 94 ಮಳಿಗೆಗಳಿದ್ದವು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಾಧಿಕಾರದ ಪುಸ್ತಕಗಳೇ ಸುಮಾರು 82 ಸಾವಿರ ರೂ.ನಷ್ಟು ಮಾರಾಟವಾಗಿದ್ದು ಪುಸ್ತಕ ಪ್ರೇಮಿಗಳು ಹಾಗೂ ಮಾರಾಟಗಾರರಲ್ಲಿ ಸಂತಸ ತಂದಿತು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ದಸರಾಕ್ಕಾಗಿ ಕಾಯದೇ ನಗರ ಹಾಗೂ ರಾಜ್ಯದ ಇನ್ನಿತರೆಡೆ ಇಂತಹ ಪುಸ್ತಕ ಮೇಳವನ್ನು ಪ್ರಾಧಿಕಾರದಿಂದ ಆಯೋಜನೆ ಮಾಡಲು ಚಿಂತನೆ ನಡೆದಿದೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮುದ್ರಣವಾದ ಬಿ.ಶಿವಾನಂದ ಅವರು ರಚಿಸಿರುವ ಬೂಕರ್ ಬಾನು ಶೀರ್ಷಿಕೆಯ ಬಾನು ಮುಷ್ತಾಕ್ ಬದುಕು-ಬರಹ ಕೃತಿ ಕೂಡ ಬಿಡುಗಡೆಗೊಂಡಿತು. ಸಾಹಿತಿ, ಕಲಾವಿದರೊಂದಿಗೆ ಸೆಲ್ಫಿ ಸಹಾ ಜನಪ್ರಿಯವಾಯಿತು. ಮೇಳದಲ್ಲಿ ಇದೇ ಮೊದಲ ಬಾರಿಗೆ ಪುಸ್ತಕ ರಥ ಎಂಬ ಪರಿಕಲ್ಪನೆಯೊಡನೆ ದಸರಾ ನೋಡಲು ಬಂದವರಿಗೆ ಕನ್ನಡ ಪುಸ್ತಕಗಳ ಬಗ್ಗೆ ಪರಿಚಯ ಮಾಡಿಕೊಟ್ಟು, ಆಸಕ್ತಿ ಬೆಳೆಸಲಾಯಿತು. ಒಟ್ಟಿನಲ್ಲಿ ಪುಸ್ತಕ ಮೇಳ ಯಶಸ್ವಿಯಾಯಿತು ಎಂದರು.

ಸಮಿತಿ ಸದಸ್ಯರಾದ ಎಂ.ಚಂದ್ರಶೇಖರ್, ರಾಜಶೇಖರ ಕದಂಬ, ಯೋಗೀಶ್‌ಉಪ್ಪಾರ್, ತ್ರಿವೇಣಿ, ಮಹೇಶ್, ಡಾ.ಸಿ.ಪಿ.ಪರಶುರಾಮ್, ಆಡಳಿತಾಧಿಕಾರಿ ಕಿರಣ್‌ಸಿಂಗ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net