ಮಹನೀಯರ ಬದುಕು ತಿಳಿಸುವ ಪುಸ್ತಕಗಳು: ಲೇಖಕ ಡಾ.ಬಿ.ಎಸ್.ಪ್ರಣತಾರ್ತಿ ಹರನ್

301e5d9d-7a1c-4c74-9ac4-7a02710eeb61
Published on

ಮೈಸೂರು: ಅನೇಕ ಮಹನೀಯರ ಬದುಕು ಕಟ್ಟಿಕೊಡುವಲ್ಲಿ ಶ್ರೇಷ್ಠ ಪುಸ್ತಕಗಳು ಮಹತ್ವ ಪಾತ್ರ ವಹಿಸಿವೆ ಎಂದು ಲೇಖಕ ಡಾ.ಬಿ.ಎಸ್.ಪ್ರಣತಾರ್ತಿ ಹರನ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ, ಸಂಸ್ಕೃತಿ ಬುಕ್ ಏಜೆನ್ಸೀಸ್‌ನಿಂದ ರಾಷ್ಟ್ರೀಯ ಒಂದು ಪುಸ್ತಕ ಓದು ದಿನದ ಅಂಗವಾಗಿ ಸೆ.6ರಿಂದ 10ರ ವರೆಗೆ ವಿಜಯನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಆಯೋಜಿಸಿರುವ ಪುಸ್ತಕ ಪ್ರದರ್ಶನ ಹಾಗೂ ಮಾರಾಟಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಉತ್ತಮ ಪುಸ್ತಕಗಳನ್ನು ಅಧ್ಯಯನ ಮಾಡುವುದರಿಂದ ವ್ಯಕ್ತಿತ್ವ ವಿಕಸನ ಸಾಧ್ಯವಿದೆ. ಹೀಗಾಗಿಯೇ ಶ್ರೇಷ್ಠ ಪುಸ್ತಕಗಳು ಹಲವು ಮಹಾನೀಯರ ಬದುಕನ್ನೇ ಬದಲಾಯಿಸಿವೆ. ಪುಸ್ತಕ ಓದುವ ಹವ್ಯಾಸ ನೋವು, ದುಃಖ, ಬೇಸರವನ್ನು ಕಳೆಯುತ್ತವೆ. ಆದ್ದರಿಂದ ವಿದ್ಯಾರ್ಥಿ ದಿಸೆಯಿಂದಲೇ ಉತ್ತಮ ಪುಸ್ತಕ ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂದಿನ ಪೀಳಿಗೆಗೆ ಓದು ದುಬಾರಿಯಾಗಿದೆ. ಓದು ಪರೀಕ್ಷೆಗೆ ಮಾತ್ರ ಸೀಮಿತವಾಗಿರುವ ಸಮಯದಲ್ಲಿ ಮಕ್ಕಳಲ್ಲಿ ಸೃಜನಶೀಲತೆ, ಸಂವೇದನೆ, ವಿಮರ್ಶಾತ್ಮಕ ಪ್ರವೃತ್ತಿ ಬೆಳೆಸುವ ಜರೂರತ್ತು ಇದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಶ್ರೀಮಂತವಾಗಿದ್ದು, ವಿಶ್ವ ಮಟ್ಟದಲ್ಲಿ ಕನ್ನಡ ಸಾಹಿತ್ಯದ ಪತಾಕೆ ಹಾರಿಸಿದ ಅನೇಕ ಧೀಮಂತ ಸಾಹಿತಿಗಳು ನಮ್ಮ ನಡುವೆ ಇದ್ದಾರೆ. ಇಂತಹ ಸಾಹಿತ್ಯದ ಅಭ್ಯಾಸ ನಮ್ಮ ಮಕ್ಕಳಿಗೆ ಆಗಬೇಕು. ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ ತೋರಿಸಲು ಮಕ್ಕಳಿಗೆ ಪಾಲಕರೇ ಬಿಡುತ್ತಿಲ್ಲ. ಇದಕ್ಕೆ ತಕ್ಕಂತೆ ನಮ್ಮ ಶಿಕ್ಷ ಣ ವ್ಯವಸ್ಥೆ ಇದೆ. ಮಕ್ಕಳಲ್ಲಿ ಕನ್ನಡ ಸಾಹಿತ್ಯ ಪ್ರಜ್ಞೆ ಮೂಡಿಸುವ ಶಿಕ್ಷಣ ವ್ಯವಸ್ಥೆ ನಮಗೆ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಪುಸ್ತಕ ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸುವುದಲ್ಲದೇ ಕಲ್ಪನೆ, ದೃಷ್ಟಿಕೋನ ಮತ್ತು ಆಲೋಚನೆಗಳು ಬದಲಿಸುತ್ತವೆ. ಕಲಿಕೆಯಲ್ಲಿ ಸಂತೋಷ, ಓದುವ ಅಪಾರ ಆನಂದ, ಪುಸ್ತಕಗಳ ಮೂಲಕ ಜ್ಞಾನವನ್ನು ಹುಡುಕುವ ಉತ್ಸಾಹವನ್ನು ಆಚರಿಸುವ ಉದ್ದೇಶದಿಂದ ಪ್ರತಿ ವರ್ಷ ಆ.9ರಂದು ರಾಷ್ಟ್ರೀಯ ಪುಸ್ತಕ ಪ್ರೇಮಿಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರು. ಅವು ನಮಗೆ ಬೆಳೆಯಲು ಮತ್ತು ಕಲಿಯಲು ಸಹಾಯ ಮಾಡುತ್ತವೆ. ಪುಸ್ತಕಗಳಿಗೆ ನಮ್ಮನ್ನು ಬೇರೆಯದ್ದೇ ಪ್ರಪಂಚಕ್ಕೆ ಕರೆದುಕೊಂಡು ಹೋಗುವ ಶಕ್ತಿ ಇದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದ ಓದುವು ಚಟ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ಆಕಾಶವಾಣಿ ನಿವೃತ್ತ ನಿರ್ದೇಶಕಿ ಡಾ.ಎಂ.ಎಸ್.ವಿಜಯಾಹರನ್, ವೈದ್ಯರಾದ ಡಾ.ವಿ.ಲಕ್ಷ್ಮೀನಾರಾಯಣ, ಸಂಸ್ಕೃತಿ ಬುಕ್ ಏಜೆನ್ಸೀಸ್‌ನ ಸಂಸ್ಕೃತಿ ಸುಬ್ರಹ್ಮಣ್ಯ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಲೇಖಕ ಸಂತದೇವ (ಡಿ.ಎನ್.ಅಜ್ಜಂಪುರ) ಅವರ ಶ್ರೀಕೃಷ್ಣಾರ್ಪಣಮಸ್ತು ಕೃತಿ ಬಿಡುಗಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net