

ಮಡಿಕೇರಿ: ಪರಿಸರ ಉಳಿಸಲು ಪ್ರೇರೇಪಣೆ ನೀಡುವಂತಹ ಪುಸ್ತಕವನ್ನು ಸಿನಿಮಾ, ಕಿರುಚಿತ್ರ ಮಾಡುವಂತಾಗಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ನಟರಾಜ್ ಹೇಳಿದರು.
ನಿತ್ಯ ವನಮಹೋತ್ಸವ ತಂಡದಿಂದ ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಇಲ್ಲಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜೇಂದ್ರಸಿಂಗ್ ರಾಜ ಪುರೋಹಿತ್ ಅವರು ಬರೆದ ಯಾರ ಭೂಮಿ ನಾಟಕ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪರಿಸರ ಉಳಿಸಲು ಪ್ರೇರೇಪಣೆ ನೀಡುವಂತಹ ಅಪರೂಪದ ಈ ನಾಟಕವನ್ನು ಸಿನಿಮಾ, ಕಿರುಚಿತ್ರ, ಕನಿಷ್ಠ ಕಾರ್ಟೂನ್ ತರಹ ಅನಿಮೇಷನ್ ಸಿನಿಮಾ ಮಾಡಿದರೆ ಅದು ಮಕ್ಕಳನ್ನು ಬಹುಬೇಗ ಮುಟ್ಟುತ್ತದೆ. ಈ ಸಂಬಂಧ ಲೇಖಕರಿಗೆ ಎಲ್ಲ ಬಗೆಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ವಿರಾಜಪೇಟೆ ಸೇಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಅರ್ಜುನ್ ಮೌರ್ಯ ಮಾತನಾಡಿ, ರಾಜಸ್ಥಾನದಿಂದ ಇಲ್ಲಿ ಬಂದು ಗಿಡ ನೆಡುತ್ತಿರುವ, ಮರಗಿಡಗಳ ಬಗ್ಗೆ ಪ್ರೀತಿ ಉಂಟು ಮಾಡುತ್ತಿರುವ ರಾಜೇಂದ್ರ ಸಿಂಗ್ ಅವರ ಕಾರ್ಯ ಬಲು ಮಹತ್ವದ್ದು ಎಂದು ಶ್ಲಾಘಿಸಿದರು.
ವಿರಾಜಪೇಟೆಯ ಕಾವೇರಿ ಕಾಲೇಜಿನ ಇಂಗ್ಲೀಷ್ ಭಾಷಾ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕೆ.ಜಿ.ವೀಣಾ ಮಾತನಾಡಿ, ರಾಜೇಂದ್ರ ಸಿಂಗ್ ಅವರು ಬಹಳ ಮುಗ್ಧತೆಯಿಂದ ಈ ನಾಟಕ ಬರೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ಹಲವೆಡೆ ಸಾವಿರಾರು ಗಿಡಗಳನ್ನು ನೆಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ ಎಂದು ಹೇಳಿದರು.
ಮಡಿಕೇರಿ ಲಯನ್ಸ್ ಕ್ಲಬ್‌ನ ನವೀನ್ ಅಂಬೇಕಲ್ ಮಾತನಾಡಿ, ದುಡಿದ ಹಣದಲ್ಲಿ ಮನೆ, ವಾಹನ, ನಿವೇಶನ ಖರೀದಿಸುವುದು ಸಾಮಾನ್ಯ. ಆದರೆ, ಇವರು ಆ ಹಣದಲ್ಲಿ ಗಿಡ ನೆಡುತ್ತಿರುವುದು ಸ್ತುತ್ಯಾರ್ಹ ಕೆಲಸ ಎಂದರು.
ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್‌ನ ಬಿ.ವಿ.ಮೋಹನ್ ದಾಸ್ ಮಾತನಾಡಿ, ಮರುಭೂಮಿಯಿಂದ ಬಂದವರು ನಮಗೆ ಹಸಿರಿನ ಪಾಠ ಹೇಳುತ್ತಿದ್ದಾರೆ. ನಾವಿಲ್ಲಿ ತೋಟಗಳನ್ನು ಮಾರಾಟ ಮಾಡಿ ವಿದೇಶಕ್ಕೆ, ಹೊರ ಜಿಲ್ಲೆಗಳಿಗೆ ನೆಲೆಸುತ್ತಿದ್ದೇವೆ. ಚತುಷ್ಪಥ, ಷಟ್ಪಥ ರಸ್ತೆಗಳನ್ನು ಮಾಡುತ್ತಿದ್ದೇವೆ. ಪ್ರಕೃತಿ ನಾಶ ಮಾಡಿ ಅಭಿವೃದ್ಧಿ ಮಾಡುವುದು ಬೇಡ ಎಂದರು.
ಲೇಖಕ ರಾಜೇಂದ್ರ ಸಿಂಗ್ ಮಾತನಾಡಿ, ನಾನು ಹೆಚ್ಚು ಓದಿದವನಲ್ಲ, ದೊಡ್ಡವನೂ ಅಲ್ಲ. ಒಂದು ವರ್ಷ ಮಳೆ ಬಾರದಿದ್ದರೆ ಕೊಡಗಿನಲ್ಲಿ ಏನೂ ಉಳಿಯುವುದಿಲ್ಲ ಎಂಬ ಸಂಗತಿಯನ್ನು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ತಿಳಿಸಬೇಕು ಎನ್ನುವ ಉದ್ದೇಶದಿಂದ ಪರ್ಯಾವರಣ ಪಂಚಾಮೃತ ಯಾತ್ರೆಯನ್ನು ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.
ಅಂದ ಹಾಗೆ, ಪುಸ್ತಕಕ್ಕೆ ಬೆಲೆಯನ್ನು ೧೦೧ ಸಸಿಗಳನ್ನು ನೆಡುವುದು ಎಂದು ನಿಗದಿಪಡಿಸಲಾಗಿದೆ. ಪುಸ್ತಕ ಪಡೆದು ೧೦೧ ಸಸಿಗಳನ್ನು ನೆಟ್ಟರೆ ನನಗಷ್ಟೇ ಸಾಕು ಎಂದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಲಯನ್ಸ್ ಕ್ಲಬ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.