ಮೌಲ್ಯಗಳ ಬೆಳವಣಿಗೆಗೆ ಪುಸ್ತಕಗಳು ಸಹಕಾರಿ

9
Published on

ಮೈಸೂರು: ಮನುಷ್ಯ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸರ್ವತೋಮುಖ ಬೆಳವಣಿಗೆ ಹೊಂದಲು ಪುಸ್ತಕಗಳು ಸಹಕಾರಿ ಎಂದು ಮೈಸೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಬಿ.ನಾಗರಾಜು ಹೇಳಿದರು.
ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಮಾನಸಗಂಗೋತ್ರಿಯ ಗ್ರಂಥಾಲಯ ವಿಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಂಥಾಲಯದ ಬಳಕೆ ಅಂದು-ಇಂದು ವಿಷಯದ ಕುರಿತು ಉಪನ್ಯಾಸ ಕಾಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುಸ್ತಕದ ಮೌಲ್ಯ ಮತ್ತು ಸಾರ್ಥಕ್ಯ ಪಡೆಯಬೇಕಾದರೆ ಗ್ರಂಥಾಲಯಗಳು ಅವಶ್ಯ ಹಾಗೂ ಗ್ರಂಥಪಾಲಕನ ಪಾತ್ರ ಅತಿ ಮಹತ್ವದ್ದಾಗಿದೆ. ಪುಸ್ತಕಗಳನ್ನು ಓದುವಂತಹ ಅಭ್ಯಾಸ ಮಾಡಿಕೊಂಡರಷ್ಟೇ ಮನುಷ್ಯನ ಜೀವನ, ಮನಸ್ಥಿತಿ ಬದಲಾಗಲು ಸಾಧ್ಯವಾಗುತ್ತದೆ ಎಂದರು.
ಹಿಂದೆ ಹಣ ಕೊಟ್ಟು ಪುಸ್ತಕ ಕೊಳ್ಳಬೇಕಿತ್ತು. ಆದರೆ ಇವತ್ತಿನ ದಿನದಲ್ಲಿ ಯಾವುದೇ ಮಾಹಿತಿ ಕ್ಷಣ ಮಾತ್ರದಲ್ಲೇ ದೊರಕುವಂತಹ ಹೊಸ ಯುಗಕ್ಕೆ ನಾವು ಬಂದಿದ್ದೇವೆ. ಇಂದಿನ ಡಿಜಿಟಲ್ ಯುಗದವರೆಗೂ ಅನೇಕ ಪಂಡಿತರು, ಸಂಶೋಧಕರು, ಅನುಭವಿಗಳು ತಮ್ಮ ಶ್ರಮ, ಸಮಯ, ಜ್ಞಾನ ಉಪಯೋಗಿಸಿ ಮುಂದಿನ ಪೀಳಿಗೆಗೆ ಗ್ರಂಥಸ್ಥವಾಗಿ ಬರೆದಿಟ್ಟಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಡಾ.ಎಸ್.ಆರ್.ರಂಗನಾಥ್ ಜೀವನ ಮತ್ತು ಸಾಧನೆ ಎಂಬ ವಿಷಯದ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಪಾಲಕಿ ಡಾ.ಪಿ.ಸರಸ್ವತಿ ಮಾತನಾಡಿ, ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್.ಆರ್.ರಂಗನಾಥನ್ ಪ್ರಮುಖ ಕಾರಣ. ಗ್ರಂಥಾಲಯ ಸೇವೆಯಲ್ಲಿರುವವರಿಗೆ ರಂಗನಾಥನ್ ಅವರ ಸಂದೇಶಗಳು ಮಾರ್ಗದರ್ಶಕವಾಗಿ ನೆಲೆ ನಿಂತಿವೆ ಎಂದು ಹೇಳಿದರು.
ಓದುವ ಹವ್ಯಾಸ ಮತ್ತು ವಿಧಾನ ಎಂಬ ವಿಷಯದ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಾಲಯದ ವಿಶ್ರಾಂತ ಗ್ರಂಥಪಾಲಕ ಡಾ ಸಿ.ಪಿ.ರಾಮಶೇಷ್ ಮಾತನಾಡಿ, ಮೊಬೈಲ್ ಹಿಡಿಯುವ ಕೈಗಳು ಪುಸ್ತಗಳನ್ನು ಹಿಡಿಯುವಂತಾಗಬೇಕು. ಅಂದಾಗ ಮಾತ್ರ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ. ಯುವಕರು ದಾರ್ಶನಿಕರು, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯನ್ನು ಓದುವುದರೊಂದಿಗೆ ಅವರ ಆದರ್ಶ, ತತ್ವ, ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು
ಗ್ರಂಥಾಲಯ ವಿಭಾಗದ ಎ.ಎನ್.ರಮೇಶ್, ಜಯಶ್ರೀಜಗದೀಶ್, ಬಿ.ಈರಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net