

ವಿಜಯವಾಣಿ ಸುದ್ದಿಜಾಲ ಸರ್ಜಾಪುರ
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳು ಆರ್ಥಿಕವಾಗಿ ಹಿಂದುಳಿದಿದ್ದು, ಅವರನ್ನು ಶೈಕ್ಷಣಿಕವಾಗಿ ಸದೃಢಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜ್ಞಾನಾಮೃತ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ.ನಾಗರಾಜು ತಿಳಿಸಿದರು.
ಸರ್ಜಾಪುರ ರಸ್ತೆಯ ಹಾಡೋಸಿದ್ದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಬೆಂಗಳೂರು ಸುತ್ತಮುತ್ತಲಿನಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದ ಕೂಲಿಕಾರ್ಮಿಕರ ಮಕ್ಕಳು ಅತಿಹೆಚ್ಚು ಕಲಿಯುತ್ತಿದ್ದಾರೆ. ಆದರೆ, ಮಕ್ಕಳು ಕಲಿಕಾ ಸಾಮಗ್ರಿ ಪಡೆದುಕೊಳ್ಳುವಲ್ಲಿ ಅಸಹಾಯಕರಾಗಿದ್ದಾರೆ. ಅಂತಹ ಮಕ್ಕಳನ್ನು ಗುರುತಿಸಿ, ನೆರವು ನೀಡಬೇಕಿದೆ ಎಂದರು.
ಮುಖಂಡ ಕೇಶವ ಬಾಬುರೆಡ್ಡಿ ಮಾತನಾಡಿ, ಹತ್ತಾರು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಜ್ಞಾನಾಮೃತ ಸೇವಾ ಟ್ರಸ್ಟ್ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಅದರಂತೆ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಗುತ್ತಿದೆ ಎಂದರು. ಜ್ಞಾನಾಮೃತ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಶ್ರೀಹರಿ, ಮುಖಂಡರಾದ ಸುರೇಶ್, ಹರೀಶ್, ರುದ್ರೇಶ್, ಸೋಮು ಇದ್ದರು.