ಸಾಹಿತ್ಯ ವಲಯದಲ್ಲಿ ಭರವಸೆ ಮೂಡಿಸಿದ ಬುಕರ್ ಪ್ರಶಸ್ತಿ: ಡಾ. ಪುರುಷೋತ್ತಮ ಬಿಳಿಮಲೆ ಅಭಿಮತ

Kannada Abhivruddi pradhikara - 1
Published on

ಬೆಂಗಳೂರು: ಕನ್ನಡದ ಪ್ರಮುಖ ಲೇಖಕಿ ಬಾನು ಮುಷ್ತಾಕ್ ಅವರಿಗೆ ಬುಕರ್ ಪ್ರಶಸ್ತಿ ಸಂದಿರುವುದು ಸಾಹಿತ್ಯ ವಲಯದಲ್ಲಿ ಒಂದು ಭರವಸೆಯ ರೂಪಕವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಬಾನು ಮುಷ್ತಾಕ್ ತಮ್ಮನ್ನು ಜಾತ್ರೆಯಲ್ಲಿ ನಿಂತ ಏಕಾಂಗಿ ಎಂದು ಕರೆದುಕೊಳ್ಳುತ್ತಾರೆ. ಈ ರೀತಿಯ ಏಕಾಂಗಿತನವೇ ಅವರನ್ನು ಜಗತ್ತಿನ ಮುಖ್ಯ ಲೇಖಕಿಯಾಗಿ ರೂಪಿಸಿದ್ದು, ಇದರ ಪ್ರಾಮುಖ್ಯತೆಯನ್ನು ನಾಗರಿಕ ಸಮಾಜವು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

2010ರ ಜ್ಞಾನಪೀಠದ ಬಳಿಕ ಕನ್ನಡಕ್ಕೆ ಸಂದ ಅತ್ಯುನ್ನತ ಗೌರವ ಇದಾಗಿದೆ. ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಜೋಡಿ ಇದನ್ನು ಸಾಧ್ಯವಾಗಿಸಿರುವುದು ಕನ್ನಡಿಗರೆಲ್ಲರ ಹೆಮ್ಮೆಗೆ ಪಾತ್ರವಾಗಿದೆ. ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ ಕೃತಿಯನ್ನು ಎ.ಕೆ. ರಾಮಾನುಜನ್ ಅನುವಾದಿಸಿದ್ದರು. ಆ ಕೃತಿಗೆ ಬುಕರ್ ಪ್ರಶಸ್ತಿ ಸ್ವಲ್ಪದರಲ್ಲಿ ಕೈ ತಪ್ಪಿತ್ತು ಎಂಬ ಅಂಶವನ್ನು ಸ್ಮರಿಸಿರುವ ಬಿಳಿಮಲೆ, ಕರ್ನಾಟಕದ ಬಹುಭಾಷಾ ನೆಲೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು ಉತ್ಕೃಷ್ಟವಾಗಿ ತಮ್ಮ ಅನುವಾದ ಕಾರ್ಯವನ್ನು ನಿರ್ವಹಿಸುವ ಮೂಲಕ ದೀಪಾ ಭಾಸ್ತಿ ಆ ಕೊರತೆಯನ್ನು ನೀಗಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ. ವಿ.ಪಿ. ನಿರಂಜನಾರಾಧ್ಯ, ಡಾ.ರವಿಕುಮಾರ್ ನೀಹ, ದಾಕ್ಷಾಯಿಣಿ ಹುಡೇದ, ಯಾಕೂಬ್ ಖಾದರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ, ಆಪ್ತ ಕಾರ್ಯದರ್ಶಿ ಟಿ. ಎಸ್. ಫಣಿಕುಮಾರ್ ಇತರರು ಇದ್ದರು.

ಕೋಟ್:

ಈ ದೇಶದ ಸಂಸ್ಕೃತಿಯಿಂದಲೇ ಮುಸಲ್ಮಾನರನ್ನು ಅಳಿಸಿ ಹಾಕುವ ಮಾತುಗಳು ಗಟ್ಟಿಯಾಗಿ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಬಾನು ಮುಷ್ತಾಕ್ ಅವರಿಗೆ ಬುಕರ್ ಪ್ರಶಸ್ತಿ ಸಂದಿದೆ. ಇದು ಹೊಸ ಭರವಸೆ ಮೂಡಿಸಿದೆ.

ಡಾ. ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net