

ಬೆಂಗಳೂರು: ಪ್ರಕಟವಾದ ನೂತನ ಕೃತಿ ಎಷ್ಟು ಪ್ರತಿ ವ್ಯಾಪಾರವಾಗಿದೆ ಎಂಬುದೇ ಆ ಕೃತಿಯ ಮೌಲ್ಯ ನಿರ್ಧರಿಸುವ ಮಾನದಂಡವಲ್ಲ. ಹೆಚ್ಚಿನ ವ್ಯಾಪಾರವಾಗದಿದ್ದರೂ ಕೆಲ ಕೃತಿಗಳಿಗೆ ಬೆಲೆ ಇರುತ್ತದೆ ಎಂದು ಹಿರಿಯ ವಿದ್ವಾಂಸ ಶತಾವಧಾನಿ ಡಾ.ಆರ್.ಗಣೇಶ ಹೇಳಿದ್ದಾರೆ.
ನ್ಯಾಷನಲ್ ಕಾಲೇಜಿನ ಎಚ್.ಎನ್.ಸಭಾಂಗಣದಲ್ಲಿ ಸಾಹಿತ್ಯ ಭಂಡಾರ ಆಯೋಜಿಸಿದ್ದ ಸಹನ ವಿಜಯಕಮಾರ ರಚನೆಯ ಐತಿಹಾಸಿಕ ಕಾದಂಬರಿ ‘ಮಾಗಧ’ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಖ್ಯಾತ ಕಾದಂಬರಿಕಾರ ಎಸ್.ಎಲ್.ಬೈರಪ್ಪನವರೇ ಹೇಳಿರುವಂತೆ ಬರೆಯುವಾಗ ಓದುಗರನ್ನು ಗಮನದಲ್ಲಿಟ್ಟುಕೊಳ್ಳಬಾರದು. ಬರವಣಿಗೆಗಾಗಿ ಲೇಖಕ ಆಯ್ದುಕೊಂಡ ವಿಷಯಕ್ಕೆ ನ್ಯಾಯ ಒದಗಿಸುವ ಹಾಗೂ ಸತ್ಯವನ್ನು ಅನಾವರಣಗೊಳಿಸುವ ಬದ್ಧತೆಯನ್ನು ಮೈಗೂಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸತ್ಯಕ್ಕೆ ಮೊದಲ ಪೂಜೆ, ಸೌಂದರ್ಯ ಲೇಪನ ನಂತರ ಎಂಬ ಪ್ರಜ್ಞೆ ಪ್ರತಿ ಲೇಖಕರಿಗೂ ಅಗತ್ಯ.
ಸಾಮಾನ್ಯವಾಗಿ ಐತಿಹಾಸಿಕ ಕಾದಂಬರಿಗಳನ್ನು ಬರೆಯುವಾಗ ಅಲ್ಲಿನ ಪಾತ್ರಗಳಲ್ಲಿ ತಮಗರಿವಿಲ್ಲದೆ ಒಳಹೊಕ್ಕಿರುತ್ತಾರೆ. ಈ ಹಂತದಲ್ಲಿ ತನ್ನದಲ್ಲದ್ದನ್ನು ಬಿಂಬಿಸುವ ಮೂಲಕ ತನ್ನತನವನ್ನು ಪ್ರದರ್ಶಿಸುವುದು ಲೇಖಕನ ಪ್ರತಿಭೆ. ಪ್ರತಿ ಸಾಹಿತ್ಯ ರಚನೆಯ ಬಗ್ಗೆಯೂ ಟೀಕೆಗಳು ಬರುತ್ತವೆ. ನೈಜ ಇತಿಹಾಸ, ಸತ್ಯದರ್ಶನಕ್ಕಾಗಿ ಆ ಟೀಕೆಯನ್ನು ಎದುರಿಸಬೇಕು. ಇತಿಹಾಸಕ್ಕೆ ಉತ್ತರಾಧಿಕಾರಿಗಳಿಲ್ಲ ಆದರೆ ಇತಿಹಾಸದಿಂದ ಕಲಿಯಬೇಕಾದ ಪಾಠ ಅಗಾಧವಾಗಿದೆ.
ಒಬ್ಬ ನಾಯಕನ ಯೋಗ್ಯತೆ ತಿಳಿಯುವುದು ಆತನ ಸಮರ್ಥ ಉತ್ತರಾಧಿಕಾರಿಯಿಂದ. ರಾಜಾಡಳಿತದಿಂದ ಹಿಡಿದು ಇಂದಿನ ಪ್ರಜಾಪ್ರಭುತ್ವ ರಾಜಕಾರಣದವರೆಗೂ ಇದು ಅನ್ವಯ. ಅಶೋಕ ಚಕ್ರವರ್ತಿಯ ವಿಷಯದಲ್ಲೂ ಇದು ಸಾಭೀತಾಗಿದೆ. ಅಶೋಕನ ಇತಿಹಾಸವನ್ನು ಇತ್ತೀಚಿನ ರಾಜಕಾರಣಿಯೋರ್ವರಿಗೆ ಹೋಲಿಸುವಂತೆ ಬರೆದು ಪಠ್ಯಗಳಲ್ಲಿ ಕಲಿಸಿದ್ದು ಈ ದೇಶದ ದುರಂತ. ಅಂತಹ ಇತಿಹಾಸದ ನೈಜ ಚಿತ್ರಣವನ್ನು ಬಿಚ್ಚಿಡುವ ಕೆಲಸ ಸಹನ ವಿಜಯಕುಮಾರ್ ಮಾಡಿದ್ದಾರೆ ಎಂದು ಶತಾವಧಾನಿ ಗಣೇಶ ಕೃತಿಯ ಕುರಿತು ವಿವರಿಸಿದರು.
ಸಮಾರಂಭದಲ್ಲಿ ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ ಕೃತಿ ಬಿಡುಗಡೆ ಮಾಡಿದರು. ರಂಗಕರ್ಮಿ ಪ್ರಕಾಶ ಬೆಳವಡಿ, ಸಾಹಿತಿ ಗಜಾನನ ಶರ್ಮಾ, ಪ್ರಧಾನ ಗುರುದತ್ತ, ಡಾ.ನಾ.ಸೋಮೇಶ್ವರ, ಲೇಖಕಿ ಸಹನ ವಿಜಯಕುಮಾರ್ ಮತ್ತಿತರರಿದ್ದರು.