ಪತ್ರಕರ್ತರು ಸೃಜನಶೀಲ ಧ್ವನಿ ಕಳೆದುಕೊಳ್ಳದಿರಲಿ; ‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ ಕೃತಿ ಲೋಕಾರ್ಪಣೆ ಮಾಡಿದ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

JOGINMANE
Published on

ಬೆಂಗಳೂರು:  ನಮ್ಮ ಬದುಕಿನ ಆಶಯ ಹಾಗೂ ವೈಯಕ್ತಿಕ ಅನುಭವದ ಬರಹಗಳಿಗೆ ಸಾರ್ವಜನಿಕ ನೆಲೆ ಕಲ್ಪಿಸಿಕೊಡದಿದ್ದರೆ ಅದೊಂದು ಡೈರಿಯಾಗಿ ಉಳಿಯುತ್ತದೆ ಎಂದು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.

ಬಸವನಗುಡಿಯ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಭಾನುವಾರ ಸಮನ್ವಿತ ಪ್ರಕಾಶನ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಜಯವಾಣಿ ಸುದ್ದಿ ಸಂಪಾದಕ ರಾಜಶೇಖರ ಜೋಗಿನ್ಮನೆ ವಿರಚಿತ ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ ಕಥಾ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.

ಪತ್ರಿಕಾ ರಂಗದಲ್ಲಿ ಸೃಜನಶೀಲರು ಅವರಿವರ ಧ್ವನಿ ಎತ್ತರಿಸುವಲ್ಲಿ ತಮ್ಮ ಧ್ವನಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಅವರ ಅಕ್ಷರ ಕೃಷಿ ವರದಿಗಾರಿಕೆ ಸೀಮಿತವಾಗುತ್ತಿದೆ. ಆದರೆ ರಾಜಶೇಖರ ಜೋಗಿನ್ಮನೆ ಆ ಒತ್ತಡದ ಮಧ್ಯೆಯೂ ಉತ್ತಮ ಕಥೆಗಳನ್ನು ರಚಿಸಿರುವುದು ಮಹತ್ವದ ಸಂಗತಿ ಎಂದರು.

‘ನಮ್ಮ ಕಥೆಗಳನ್ನು ಯಾರು ಓದುತ್ತಾರೆ’ ಎಂಬ ನಕಾರಾತ್ಮಕ ಧೋರಣೆಯನ್ನು ಬಿಟ್ಟು ಸಾಹಿತ್ಯ ಕೃಷಿಯನ್ನು ಮುಂದುವರಿಸಬೇಕು. ಇಂದಲ್ಲದಿದ್ದರೂ ಮುಂದೊಂದು ದಿನ ನಮ್ಮ ಪುಸ್ತಕವನ್ನೇ ಓದುಗನೊಬ್ಬ ಹುಡುಕಿಕೊಂಡು ಬರುತ್ತಾನೆ. ಗ್ರಂಥಾಲಯದಲ್ಲಿರುವ ಕೃತಿಯೊಂದು ತನ್ನನ್ನು ಎತ್ತಿಕೊಳ್ಳುವ ಓದುಗನಿಗಾಗಿ ಕಾಯುತ್ತಿರುತ್ತದೆ ಎಂದು ಹೇಳಿದರು.

ರಾಜಶೇಖರ ಹೆಗಡೆ ಉತ್ತರ ಕನ್ನಡದವರು. ಆದರೆ ಆ ಭಾಗದ ಬಹುಪಾಲು ಬರಹಗಾರರು ಬಳಸುವ ಪರಿಸರಾತ್ಮಕ, ಪ್ರಾದೇಶಿಕ ಮತ್ತು ಹವ್ಯಕವನ್ನು ಭಿನ್ನವಾದ ಭಾಷೆಯನ್ನು ಈ ಕಥಾ ಸಂಕಲನದಲ್ಲಿ ಬಳಸಿದ್ದಾರೆ. ವಲಸೆ ಪ್ರವೃತ್ತಿ ಹಾಗೂ ಆಧುನಿಕ ನಾಗರಿಕತೆಯನ್ನು ವಿಷಾದಮಯ ದೃಷ್ಟಿಯಲ್ಲಿ ಕಾಣುತ್ತಿದ್ದೇವೆ. ಆದರೆ ಊರು ಬಿಟ್ಟು ಬಂದವರು ಕೆಲವನ್ನು ಕಳೆದುಕೊಳ್ಳುವ ಮತ್ತು ಪಡೆದುಕೊಳ್ಳುವ ಪ್ರವೃತ್ತಿಯನ್ನು ಜೋಗಿನ್ಮನೆ ಆತ್ಮೀಯವಾಗಿ ಸ್ವಾಗತಿಸಿ, ಪ್ರಬುದ್ಧತೆ ತೋರ್ಪಡಿಸಿದ್ದಾರೆ ಎಂದು ಕಥೆಗಾರ ಕೆ. ಸತ್ಯನಾರಾಯಣ ಹೇಳಿದರು.

ದಶಕಗಳ ಹಿಂದೆ ಪತ್ರಿಕೆಗಳಲ್ಲಿ ಪ್ರಾದೇಶಿಕ ಭಾಷಾ ಭಿನ್ನತೆ ಕಾಣುತ್ತಿದ್ದೆವು. ಇಂದು ಎಲ್ಲ ಪತ್ರಿಕೆಗಳು ಸಾಮಾನ್ಯ ಪತ್ರಿಕಾ ಭಾಷೆಯಲ್ಲಿ ಸುದ್ದಿ ಪ್ರಕಟಿಸುತ್ತಿವೆ. ಪತ್ರಿಕೆಗಳು ರಾಜಕೀಯ, ಕ್ರೌರ್ಯ, ನಕಾರಾತ್ಮಕ ವಿಚಾರಗಳನ್ನು ಬದಿಗಿಟ್ಟು ಸಾಹಿತ್ಯ, ಸಾಂಸ್ಕೃತಿಕ ಅಂಶಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಪ್ರಕಟಿಸುವ ಮೂಲಕ ಓದುಗರಿಗೆ ಸಂತೋಷ ಹಂಚಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಹಂ.ಪ. ನಾಗರಾಜಯ್ಯ ಹೇಳಿದರು.

ಸಮನ್ವಿತ ಪ್ರಕಾಶನದ ಮುಖ್ಯಸ್ಥ ಕೆ.ವಿ. ರಾಧಾಕೃಷ್ಣ, ಅಕ್ಷತಾ ಉಪಸ್ಥಿತರಿದ್ದರು.

ಪ್ರಾದೇಶಿಕ ಭಾಷೆಯಲ್ಲೇ ಸಾಹಿತ್ಯ ರಚಿಸಿ

ಕರ್ನಾಟಕದಲ್ಲಿ ಹವ್ಯಕ ಸಮುದಾಯ ಸಾಹಿತ್ಯ, ಸಂಗೀತ, ಧರ್ಮ, ಸಂಸ್ಕೃತಿ ಹಾಗೂ ಪರಂಪರೆ ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಿದೆ. ಸಾಹಿತ್ಯದ ದೃಷ್ಟಿಕೋನದಿಂದ ನೋಡಿದಲ್ಲಿ ಪ್ರಾದೇಶಿಕ ಹಾಗೂ ಸಮುದಾಯದ ಭಾಷೆಯ ಸೊಗಡಿನಲ್ಲಿಯೇ ಸಾಹಿತ್ಯ ರಚಿಸಬೇಕು. ಕಥೆ, ಕಾದಂಬರಿ ಮತ್ತು ದೀರ್ಘ ಬರಹಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಬಳಕೆ ಮಾಡಬೇಕು. ಇದರಿಂದ ಪ್ರಾದೇಶಿಕ ನೆಲೆಗಟ್ಟನ್ನು ಸಾಹಿತ್ಯ ಕ್ಷೇತ್ರದಲ್ಲಿ ಉಳಿಸಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಂಶೋಧಕ ಡಾ. ಹಂ.ಪ. ನಾಗರಾಜಯ್ಯ ಹೇಳಿದರು.

ದ್ವಿಗುಣವಾದ ಸಂಭ್ರಮ

ಗಣರಾಜ್ಯೋತ್ಸವವನ್ನು ದೇಶ ಸಂಭ್ರಮದಿಂದ ಆಚರಿಸುತ್ತಿದೆ. ಆದರೆ ನನಗೆ ಸಹಜ ಸಂಭ್ರಮದ ಜತೆಗೆ ವೃತ್ತಿ ಹಾಗೂ ಪ್ರವೃತ್ತಿಯಿಂದಲೂ ಸಂಭ್ರಮ ದ್ವಿಗುಣವಾಗಿದೆ. ಇದಕ್ಕೆ ಕಾರಣ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಸಂದಿದ್ದು ಹಾಗೂ ವೈಯಕ್ತಿಕವಾಗಿ ಕಥಾಸಂಕಲನ ಬಿಡುಗಡೆಯಾಗುತ್ತಿರುವುದು ಸಂತಸವನ್ನು ದ್ವಿಗುಣಗೊಳಿಸಿದೆ ಎಂದು ರಾಜಶೇಖರ ಜೋಗಿನ್ಮನೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net