

ಮಂಗಳೂರು : ಒಂದು ಭಾಷೆಯ ಕೃತಿಯನ್ನು ಇನ್ನೊಂದು ಭಾಷೆಗೆ ಅನುವಾದ ಮಾಡುವುದೆಂದರೆ ಬಹು ಪ್ರಯಾಸದ ಕೆಲಸ.
ಮೂಲ ಕೃತಿಯಲ್ಲಿ ಕೃತಿಕಾರನಿಗೆ ಸ್ವಾತಂತ್ರೃವಿರುತ್ತದೆ. ಆದರೆ ಭಾಷಾಂತಕಾರ ಮೂಲ ಕೃತಿಗೆ ಅಪಚಾರವಾಗದಂತೆ ವಿಷಯ ಹಾಗೂ ಶಬ್ದವನ್ನು ಹುಡುಕಿ ಭಾಷಾಂತರಿಸಬೇಕಾಗುತ್ತದೆ ಎಂದು ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ.ಪುರಾಣಿಕ್ ಹೇಳಿದರು.
ಶಾರದಾ ವಿದ್ಯಾಸಂಸ್ಥೆಯ ಕನ್ನಡ ಉಪನ್ಯಾಸಕಿ ಯಶೋದಾ ಕುಮಾರಿ ಅನುವಾದಿಸಿದ ಡಾ. ಮೀನಾಕ್ಷಿ ರಾಮಚಂದ್ರ ಅವರ ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ಕನ್ನಡ ಕೃತಿ ’ಒಳದನಿ’ ಯ ತುಳು ಅವತರಣಿಕೆ ’ಉಡಲ ದುನಿಪು’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಸಮಿತಿ ಹಾಗೂ ಶಾರದಾ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ
ಶಾರದಾ ವಿದ್ಯಾಸಂಸ್ಥೆಯ ಧ್ಯಾನ ಮಂದಿರದಲ್ಲಿ ನಡೆದ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಅಭಾಸಾಪ ಪ್ರಾಂತೀಯ ವಿಶೇಷ ಆಹ್ವಾನಿತ ಡಾ. ಮಾಧವ ಎಂ. ಕೆ. ವಹಿಸಿದ್ದರು.
ತುಳು ವಿದ್ವಾಂಸ ಚಂದ್ರಹಾಸ ಕಣಂತೂರು ಕೃತಿ ಪರಿಚಯ ಪರಿಚಯಿಸಿದರು. ಶಾರದಾ ಸಮೂಹ ಸಂಸ್ಥೆಯ ಕಾರ್ಯದರ್ಶಿ
ಪ್ರದೀಪ ಕುಮಾರ ಕಲ್ಕೂರ , ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ನಾಯಕ್, ನಿವೃತ್ತ ಪ್ರಾಂಶುಪಾಲೆ ಡಾ. ಲೀಲಾ ಉಪಾಧ್ಯಾಯ , ಪ್ರಭಾಕರ ಪೇಜಾವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಭಾಸಾಪ ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷೆ ಡಾ. ಮೀನಾಕ್ಷಿ ರಾಮಚಂದ್ರ ಸ್ವಾಗತಿಸಿ,ಕಾರ್ಯದರ್ಶಿ ಗೀತಾ ಲಕ್ಷ್ಮೀಶ್ ವಂದಿಸಿದರು. ಪದಾಧಿಕಾರಿ ಸಂಧ್ಯಾ ಆಳ್ವ ಕಾರ್ಯಕ್ರಮ ನಿರೂಪಿಸಿದರು.