

ಹೊನ್ನಾವರ: ಸಾಧನೆಯು ಸತತ ಪ್ರಯತ್ನದಿಂದ ಒಲಿಯುವುದು. ಬುದ್ಧನು ಸಮಾಜದ ಸತ್ಯದ ಶೋಧನೆಗೆ ಹೊರಟ ಹಾಗೆ ಎಂ.ಡಿ.ಹರಿಕಾಂತ ಅವರು ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿದ್ದಾರೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯ ಕನ್ನಡ ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಎಸ್.ಕೆ. ಮೇಲಕರ ಹೇಳಿದರು.
ಮಂಕಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮೇಘಶ್ರೀ ಸೇವಾ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸಾಹಿತಿ ಎಂ.ಡಿ.ಹರಿಕಾಂತ ಅವರ ‘ಸತ್ಯ ಶೋಧನೆ’ ಪಠ್ಯಾಧಾರಿತ ಯಕ್ಷಗಾನ ಪ್ರಸಂಗ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಮಾರಂಭ ಉದ್ಘಾಟಿಸಿದ ಸಾಹಿತಿ ಸುರೇಶ ನಾಯ್ಕ ಮಂಕಿ ಮಾತನಾಡಿ, ಯಕ್ಷಗಾನ ಕ್ಷೇತ್ರದಲ್ಲಿನ ಸಾಧನೆ ಮಹತ್ವವಾದುದು. ಮಂಕಿ ಗೆಳೆಯರ ಬಳಗದ ಎಂ.ಡಿ.ಹರಿಕಾಂತ ಅವರ ಅವಿರತ ಪ್ರಯತ್ನ ಸಾಧನೆಯ ಮೆಟ್ಟಿಲು ಏರಲು ನೆರವಾಗಿದೆ. ಅವರ ಸತ್ಯಶೋಧನೆ ಕೃತಿಯು ಉಪಯುಕ್ತವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಎಸ್.ಎಚ್.ಗೌಡ ಮಾತನಾಡಿ, ಜೀವನದಲ್ಲಿ ನಿಜವಾದ ನೋವುಂಡವರು, ಸಮಯದ ಬಿಡುವಿಲ್ಲದವರು ಹಾಗೂ ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿ ಇದ್ದ ಹಲವರು ಸಾಧನೆಯ ಶಿಖರವನ್ನು ಏರಿದ್ದಾರೆ. ಅಂತಹ ಸಾಧಕರ ಸಾಲಿನ ಎಂ.ಡಿ.ಹರಿಕಾಂತ ಅಭಿನಂದನಾರ್ಹರು ಎಂದರು.
ಲೇಖಕ ಎಂ.ಡಿ.ಹರಿಕಾಂತ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಸದಾನಂದ ಹರಿಕಾಂತ, ಡಾ. ಹರಿಹರ ಹರಿಕಾಂತ ಅಂಕೋಲಾ, ಶಂಕರ ನಾಯ್ಕ ಶಿರಾಲಿ, ನೀಲಕಂಠ ಬಳೆಗಾರ ಮಾತನಾಡಿದರು. ಉದಯ ನಾಯ್ಕ ಮಂಕಿ ಪುಸ್ತಕ ಪರಿಚಯಿಸಿದರು. ಕಸಾಪ ಕಾರ್ಯದರ್ಶಿ ಗಜಾನನ ನಾಯ್ಕ ಸ್ವಾಗತಿಸಿದರು. ವಿಷ್ಣು ನಾಯ್ಕ ವಂದಿಸಿದರು. ಅಣ್ಣಪ್ಪ ನಾಯ್ಕ ನಿರ್ವಹಿಸಿದರು.