

ಮೈಸೂರು: ಲೇಖಿಕಾ ಸಾಹಿತ್ಯ ವೇದಿಕೆ ವತಿಯಿಂದ ಕುವೆಂಪುನಗರದ ಸುರುಚಿ ರಂಗಮನೆಯಲ್ಲಿ ಬುಧವಾರ ಪುಸ್ತಕ ಬಿಡುಗಡೆ, ‘ವಾಣಿ’ ಕಥಾಸ್ಪರ್ಧೆ ಬಹುಮಾನ ವಿತರಣೆ ಹಾಗೂ ಸಂವಾದ ಕಾರ್ಯಕ್ರಮ ನೆರವೇರಿತು.
ಶ್ರಿಶಲಾ ಬ್ರಹ್ಮಯ್ಯ ರಚನೆಯ ‘ಸಮ್ಯಕ್ ದೀಪ’, ಡಾ.ಎಂ.ಆರ್.ಮಂದಾರವಲ್ಲಿ ರಚನೆಯ ‘ದಿವ್ಯ ಚಿಕಿತ್ಸೆ’ ಆರೋಗ್ಯಕ್ಕೆ ಹೆಬ್ಬಾಗಿಲು, ಟಿ.ಆರ್.ಉಷಾರಾಣಿ ಅವರ ‘ಸಕ್ಕರೆ ಮಿಠಾಯಿ’ ಪುಸ್ತಕಗಳನ್ನು ಗಣ್ಯರು ಬಿಡುಗಡೆ ಮಾಡಿದರು.
ಇದೇ ವೇಳೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಲೇಖಕಿ ವಸುಮತಿ ಉಡುಪ, ಹೈಸ್ಕೂಲ್ ಓದುವಾಗ ಕವನ ಬರೆದೆ. ಆಮೇಲೆ ಕಥೆಗಳತ್ತ ವಾಲಿದೆ. ಹೈಸ್ಕೂಲ್ ಮುಗಿಯುವುದರೊಳಗೆ ನೋಟ್‌ಬುಕ್ ತುಂಬಾ ಕಥೆಗಳನ್ನು ಬರೆದಿದ್ದೆ. 18ನೇ ವಯಸ್ಸಿಗೇ ಮದುವೆಯಾಗಿ ಶಿವಮೊಗ್ಗದಲ್ಲಿದ್ದೆ. ಆಗ ಹಳ್ಳಿ ಹುಡುಗಿಯ ಸಂಕೋಚವಿತ್ತು, ಮುಗ್ಧತೆಯಿತ್ತು. ಮಲೆನಾಡಿನಲ್ಲಿ ಹುಟ್ಟಿ ಬೆಳೆದಿದ್ದರೂ ಮೈಸೂರಿನಲ್ಲಿ ನೆಲೆಸಿದ ಮೇಲೆ ಇಲ್ಲಿನ ಭಾಷೆ ಬಳಸಿ ಕೃತಿ ರಚಿಸಿರುವೆ ಎಂದು ತಿಳಿಸಿದರು.
ವೇದಿಕೆ ಸಂಚಾಲಕಿ ಶೈಲಜಾ ಸುರೇಶ್ ಮಾತನಾಡಿ, ನಮ್ಮ ಹಿರಿಯ ಲೇಖಕಿಯರ ಕುರಿತು ಈಗಿನ ತಲೆಮಾರಿನವರಿಗೆ ತಿಳಿಸುವ ಸಲುವಾಗಿ 82 ಲೇಖಕಿಯರ ಬದುಕು- ಬರಹಗಳನ್ನು ಆನ್‌ಲೈನ್ ಮೂಲಕ ಪ್ರಸಾರಿಸಿದ್ದೇವೆ. ಅಲ್ಲದೆ ಲೇಖಿಕಾ ಸಾಹಿತ್ಯ ಪತ್ರಿಕೆಯನ್ನು ನಿರಂತರವಾಗಿ ತರುತ್ತಿದ್ದೇವೆ ಎಂದರು.