ಮಂಡ್ಯದೊಂದಿಗೆ ಹೃದಯಪೂರ್ವಕ ನಂಟು: ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಮಾನದ ನುಡಿ

1 (1)
Published on

ಮಂಡ್ಯ: ಮಂಡ್ಯದೊಂದಿಗೆ ಮೈಸೂರು ಸಂಸ್ಥಾನ ಹೃದಯಪೂರ್ವಕ ನಂಟನ್ನು ಹೊಂದಿದೆ. ಅಂತೆಯೇ ನಮ್ಮ ಸಂಸ್ಥಾನದ ಮೂಲ ಬೇರು ಜಿಲ್ಲೆಯಲ್ಲಿ ಭದ್ರವಾಗಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ರಚಿತ ಮೀರಾ ಶಿವಲಿಂಗಯ್ಯ ಅವರ ‘ಮರೆಯಲಾಗದ ಮಹಾನುಭಾವ ನಾಲ್ವಡಿ ಕೃಷ್ಣರಾಜ ಒಡೆಯರ್’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಮೈಸೂರು ಸಂಸ್ಥಾನದ ಮೊದಲ ರಾಜಧಾನಿ ಶ್ರೀರಂಗಪಟ್ಟಣ. ಇಲ್ಲಿಯೇ ನಮ್ಮ ಹಿರಿಯರಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ಚಿಕ್ಕದೇವರಾಜ ಒಡೆಯರ್ ಸೇರಿದಂತೆ ಸಂಸ್ಥಾನದ ಕೀರ್ತಿ ಕಳಶರು ಜನಿಸಿ ಆಳ್ವಿಕೆ ಆರಂಭಿಸಿದರು. ಶಿಂಷಾದಲ್ಲಿ ದೇಶದ ಪ್ರಥಮ ಜಲವಿದ್ಯುದಾಗಾರ ನಿರ್ಮಿಸಿದ್ದು ನಾಲ್ವಡಿಯವರಾದರೆ, ಮೈಷುಗರ್ ಕಾರ್ಖಾನೆ ಕೂಡ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲೇ ಜನ್ಮ ತಳೆದಿದ್ದು. ನಂತರದಲ್ಲಿ ಜಿಲ್ಲೆಯ ಜನರ ಜೀವನಾಡಿಯಾದ ಕನ್ನಂಬಾಡಿ ಅಣೆಕಟ್ಟು ನಿರ್ಮಾಣ ಕೂಡ ಒಡೆಯರ್ ಅವರ ಕೀರ್ತಿ ಕಳಶವಾಗಿವೆ. ಹಾಗಾಗಿ ಮಂಡ್ಯದಲ್ಲಿ ಮೈಸೂರು ಸಂಸ್ಥಾನದ ಬೇರು ಗಟ್ಟಿಯಾಗಿ ತಳವೂರಿದೆ ಎಂದು ಹೇಳಿದರು.

ನಾವು ನಮ್ಮ ಸಂಸ್ಥಾನದ ಬಗ್ಗೆ ಮಾತನಾಡುವುದಕ್ಕಿಂತ ಜನರು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುವಂತಹ ಕೆಲಸ ಮಾಡಿರುವ ನಮ್ಮ ಹಿರಿಯರ ಮಾದರಿ ಪ್ರಸ್ತುತದಲ್ಲಿ ಮೈಸೂರು ಬ್ರಾೃಂಡ್ ಆಗಬೇಕಿದೆ. ಮೈಸೂರಿನ ರಾಜರು ನಿರ್ಮಿಸಿದ ಸಂಸ್ಥೆಗಳು ಶತಮಾನೋತ್ಸವ ಕಂಡಿವೆ. ಹಾಗಾಗಿ ಮೈಸೂರಿನ ಸುವರ್ಣ ಕಾಲ ಮತ್ತೆ ಮರುಕಳಿಸುವಂತೆ ನಾವು ವರ್ತಮಾನದಲ್ಲಿ ನಾಲ್ವಡಿಯವರ ದೂರದೃಷ್ಟಿಯನ್ನು ಮಾದರಿಯಾಗಿಸಿಕೊಳ್ಳಬೇಕಿದೆ. ಮುಂದಿನ ಪೀಳಿಗೆಗೆ ನಾವು ಕೊಡಬಹುದಾದ ಕೊಡುಗೆ ಏನು?. ಇಂದು ನಮ್ಮ ಪ್ರಕೃತಿ ವಿಕೃತಿಯಾಗುತ್ತಿದೆ. ಆಧುನಿಕ ಸೈಬರ್ ಯುಗ ಭದ್ರತೆಯಿಲ್ಲದೆ ನರಳುತ್ತಿದೆ. ಈ ಎರಡೂ ಅಂಶಗಳನ್ನು ಮುನ್ನೆಲೆಗೆ ತಂದು ಸಂರಕ್ಷಿಸಿದರೆ ಮಾತ್ರ ವಿಕೃತಿ ಹೋಗಿ ನೈಜ ಪ್ರಕೃತಿ ಬರಲಿದೆ. ಅದಕ್ಕಾಗಿ ಪ್ರತಿಯೊಬ್ಬರೂ ನಮ್ಮ ಪೂರ್ವಿಕರಂತೆ ಬಟ್ಟೆ ಬ್ಯಾಗ್ ಬಳಸುವ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆಗೆ ಕೈಜೋಡಿಸಬೇಕೆಂದು ಸಲಹೆ ನೀಡಿದರು.

ಸಂಸ್ಕೃತಿ ಚಿಂತಕ ಪೊ.ಎಂ.ಕೃಷ್ಣೇಗೌಡ ಮಾತನಾಡಿ, ಮನುಷ್ಯನಿಗೆ ಕೃತಜ್ಞತಾ ಭಾವ ಇಲ್ಲದಿದ್ದರೆ ಆ ಸಮಾಜ ಅವನತಿಯತ್ತ ಸಾಗುತ್ತದೆ. ಕೃತಜ್ಞತೆ ಉಳಿಸಿಕೊಂಡವರು ಮಾತ್ರ ಸುಸಂಸ್ಕೃತರಾಗುತ್ತಾರೆ ಎನ್ನುವುದಕ್ಕೆ ಮಂಡ್ಯ ಜನರೇ ಸಾಕ್ಷಿ. ಜಿಲ್ಲೆಗೆ ನೀರು, ಬೆಳಕು ಕೊಟ್ಟ ನಾಲ್ವಡಿ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರವನ್ನು ಮಂಡ್ಯದ ಪ್ರತಿ ಮನೆಯಲ್ಲೂ ಕಾಣಬಹುದು. ಇದು ಜನತೆಗಿರುವ ಕೃತಜ್ಞತಾ ಭಾವದ ಧ್ಯೋತಕ ಎಂದರು.

ಕೃತಿ ಕುರಿತು ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮೀರಾ ಶಿವಲಿಂಗಯ್ಯ ಅವರು ದೇಶದ ರಾಜರ ಎಲ್ಲ ವಿಚಾರಗಳನ್ನೂ ಮಂಥನ ಮಾಡಿ ಅದರಲ್ಲಿ ನಾಲ್ವಡಿ ಅವರ ಕೊಡುಗೆಯನ್ನು ತುಲನೆ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಷ್ಟು ವೈಜ್ಞಾನಿಕ ಮತ್ತು ಆಧ್ಯಾತ್ಮಿಕವಾಗಿ ಆಳ್ವಿಕೆ ಮಾಡಿದ ಮತ್ತೊಬ್ಬ ರಾಜನಿಲ್ಲ ಎಂಬುದನ್ನು ತಮ್ಮ ಗಹನ ಸಂಶೋಧನೆಯಲ್ಲಿ ಕಂಡುಕೊಂಡು ಪ್ರತಿಯೊಂದು ಹಂತವನ್ನೂ ಕೂಡ ಸಾಧ್ಯಂತವಾಗಿ ನಿದರ್ಶನಗಳ ಮೂಲಕ ದಾಖಲಿಸುತ್ತಾ ಹೋಗಿದ್ದಾರೆ. ಲಾರ್ಡ್ ಕರ್ಜನ್ ಅವರು 1902ರಲ್ಲಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕದ ಸಂದರ್ಭದಲ್ಲಿ ಮಾಡಿದ್ದ ಭಾಷಣವನ್ನು ನಾವೆಲ್ಲರೂ ತಿಳಿಯಬೇಕು. ಅದರಲ್ಲೂ ವಿದ್ಯಾರ್ಥಿ ಯುವಜನತೆ ಅರಿಯಬೇಕಾದ ಅಗತ್ಯವಿದೆ ಎಂದು ಬೆಳಕು ಚೆಲ್ಲಿದರು.

ಖ್ಯಾತ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪೊ.ಬಿ.ಜಯಪ್ರಕಾಶಗೌಡ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಪೊ.ಬಿ.ಶಿವಲಿಂಗಯ್ಯ, ಡಾ.ಹೇಮಾ, ವಿಸ್ಮಯ ಬುಕ್‌ಹೌಸ್‌ನ ಪ್ರಕಾಶ್ ಚಿಕ್ಕಪಾಳ್ಯ, ಡಾ.ಕೆಂಪಮ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net