

ಮಡಿಕೇರಿ: ಸಾಹಿತಿ, ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಕೆ. ಭರತ್ ಬರೆದ ಹನಿಗವನಗಳ ಸಂಕಲನ ಧ್ಯಾನಕ್ಕೆ ಬಿದ್ದ ಅಕ್ಷರಗಳು ಕೃತಿ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ಜರುಗಿತು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಅಭಿನಯ ಕಲಾ ಮಿಲನ ಚಾರಿಟೇಬಲ್ ಟ್ರಸ್ಟ್ ಕೊಡಗು ಸಹಯೋಗದಲ್ಲಿ ಮಡಿಕೇರಿಯ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಕೃತಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅನಂತಶಯನ, ಗಂಧವನ್ನು ತಿಕ್ಕಿದಷ್ಟು ಸುಗಂಧ ಹರಡುತ್ತದೆ. ಅದೇ ರೀತಿ ಜೀವನದಲ್ಲಿ ಹೆಚ್ಚು ನೋವು ಅನುಭವಿಸಿದವರು ಕವಿಯಾದರೆ ಸುಂದರವಾದ ಕವನ ಹುಟ್ಟುತ್ತೆ. ಕೆಲವರು ಬರೆದಾಗ ಅದರಲ್ಲಿ ಸಂದೇಶ ಇರಲ್ಲ. ಚಂದ ಕಾಣುತ್ತದೆ ಅಷ್ಟೆ. ಅಂತಹ ಬರಗಾರರು ಹೆಚ್ಚಿದ್ದಾರೆ. ಆದರೆ, ಅನುಭವವನ್ನು ಬರಹಕ್ಕೆ ಇಳಿಸುವವರ ಸಂಖ್ಯೆ ಕಡಿಮೆ ಇದೆ ಎಂದು ಅಭಿಪ್ರಾಯಪಟ್ಟರು.
ಬರವಣಿಗೆಯಲ್ಲಿ ಆಸಕ್ತಿ ಉಳ್ಳವರು ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ತಾರೆ. ಬೇರೆಯವರೊಂದಿಗೆ ಬೆರೆತಾಗ ಮನಸ್ಸು ಚಂಚಲವಾಗಿರುತ್ತದೆ. ಏಕಾಂಗಿಯಾಗಿದ್ದಾಗ ನಮ್ಮ ಪ್ರತಿಭೆ ತೆರೆದುಕೊಳ್ಳುತ್ತದೆ. ನಮ್ಮೊಳಗಿನ ಚಿಂತನೆ ಅಕ್ಷರ ರೂಪ ಪಡೆದುಕೊಳ್ಳುತ್ತೆ. ಮಿಲನಾ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಮಾರುತಿ ದಾಸಣ್ಣವರ್ ಮಾತನಾಡಿ, ಕವಿ ಕಾಣದನ್ನು ಕಲಾವಿದ ಕಾಣಬಲ್ಲ. ಕವಿಗೆ ವರ್ಣಿಸಲು ಅಕ್ಷರಗಳಿವೆ. ಆದರೆ, ಕಲಾವಿದ ಆಂಗಿಕ ಕಲೆಯ ಮುಖಾಂತರವೇ ತನ್ನ ಭಾವನೆಗಳನ್ನು ಹೇಳಬೇಕಾಗುತ್ತದೆ. ಸಂವೇದನಾಶೀಲ ಕವಯತ್ರಿ, ಕಲಾವಿದೆಯಾಗಿದ್ದುಕೊಂಡು ದಿಟ್ಟತನದಿಂದ ವಿಚಾರಗಳನ್ನು ಪ್ರಸ್ತುತಪಡಿಸುವ ವ್ಯಕ್ತಿ ಮಿಲನಾ ಭರತ್. ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು, ಮತ್ತಷ್ಟು ಕೃತಿಗಳನ್ನು ಹೊರತರಲು ಮುಂದಾಗಬೇಕೆಂದು ಹೇಳಿದರು.
ಪುಸ್ತಕದ ಕುರಿತು ಮಾತನಾಡಿದ ಸಾಹಿತಿ ಕಾಜೂರು ಸತೀಶ್, ನೃತ್ಯ ಮತ್ತು ಕಾವ್ಯ ಒಂದಾಗುವುದು ಧ್ಯಾನದಿಂದ. ಇವೆರಡೂ ಈ ಕೃತಿಯಲ್ಲಿದೆ. ಹೆಣ್ಣೆಂದರೇನು, ಪೌರಾಣಿಕ ಮತ್ತು ಚಾರಿತ್ರಿಕವಾಗಿ ನೊಂದಿರುವ ಪಾತ್ರಗಳು, ರಾಮ, ಸೀತಾ, ಹೆಣ್ಣು ಗಂಡಿನ ನಡುವಿನ ಸಾಮರಸ್ಯ, ಪರಮ ಪ್ರೇಮ, ನಿಷ್ಕಾಮ, ಹಲವು ಮಾದರಿಯ ಕವಿತೆಗಳು ಪುಸ್ತಕದಲ್ಲಿದೆ ಎಂದು ವಿವರಿಸಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಮೈಸೂರಿನ ಅಮೃತ ವಿವಿ ದೃಶ್ಯ ಮತ್ತು ಸಂವಹನ ವಿಭಾಗದ ಮುಖ್ಯಸ್ಥೆ ಡಾ.ಬಾಲಾಡಿ ಮೌಲ್ಯ ಮಾತನಾಡಿ, ಹೆಣ್ಣಿಗೆ ನೋವು, ಸವಾಲುಗಳು ಇಲ್ಲದೇ ಇದ್ದಿದ್ದರೆ ಇಷ್ಟೊಂದು ಸಾಹಿತ್ಯ ಕ್ಷೇತ್ರದಲ್ಲಿ ಕಥೆ, ಕವನಗಳು ಮೂಡಿಬರಲು ಸಾಧ್ಯವಾಗುತ್ತಿರಲಿಲ್ಲ. ಮಕ್ಕಳಿಗೆ ಮನೆಯಲ್ಲೇ ಉತ್ತಮ ಸಂಸ್ಕೃತಿಯನ್ನು ಕಲಿಸಿಕೊಟ್ಟರೆ ಪ್ರಪಂಚದಲ್ಲಿ ಅಸಹಜ, ಪೈಶಾಚಿಕ ಘಟನೆಗಳನ್ನು ನಿಯಂತ್ರಿಸಲು ಸಾಧ್ಯ. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳಿಗೆ ಆರೋಗ್ಯಕರ ಮಾಹಿತಿಗಳು ಮಾತ್ರ ಸಿಗುವಂತೆ ಮಾಡಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ.ಪೂವಯ್ಯ ಮಾತನಾಡಿ, ಕೊಡಗಿನಲ್ಲಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಆಸಕ್ತರಾದವರ ಸಂಖ್ಯೆ ಕಡಿಮೆ ಇದೆ. ಕ್ಲಬ್‌ನ ಬೆಳ್ಳಿ ಮಹೋತ್ಸವ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸಾಹಿತ್ಯ ಕಾರ್ಯಕ್ರಮಗಳಿಗೂ ಅವಕಾಶ ನೀಡಿದ್ದೇವೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಅಭಿನಯ ಕಲಾ ಮಿಲನ ಕೊಡಗು ಸಂಸ್ಥೆಯ ಟ್ರಸ್ಟಿ ಕುದುಕುಳಿ ಜೆ.ಭರತ್ ಮಾತನಾಡಿದರು. ಯುವ ಕಲಾವಿದೆ ಭಾಗಮಂಡಲದ ಸ್ಪೂರ್ತಿ ಉಷಾ ನೃತ್ಯ ಪ್ರದರ್ಶನ ನೀಡಿ ರಂಜಿಸಿದರು. ಕಲಾವಿದ ಲೋಕೇಶ್ ಊರುಬೈಲು ಮಿಲನಾ ಭರತ್ ಅವರ ಕವನ ವಾಚನ ಮಾಡಿದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕ ಮಾತನಾಡಿದರು. ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರೆ, ವಿದ್ಯಾರ್ಥಿನಿ ಸ್ನೇಹ ಪ್ರಾರ್ಥಿಸಿದರು. ರೆಜಿತ್ ಕುಮಾರ್ ಗುಹ್ಯ ಸ್ವಾಗತಿಸಿದರು.