ಸಾಹಿತ್ಯ ಕೃಷಿಗೆ ಎಲ್ಲರ ಬೆಂಬಲ ಅಗತ್ಯ, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸೇವಾ ಸಹಕಾರ ಸಂಘದ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ಅಭಿಪ್ರಾಯ

d.13 Dhl Pustaka bidugade News ph-1
Published on

ದೇವನಹಳ್ಳಿ: ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಮೊಬೈಲ್‌ನಲ್ಲೇ ವಿಶ್ವದ ಆಗುಹೋಗು ತಿಳಿಯಬಲ್ಲ ಕಾಲದಲ್ಲಿ ಪುಸ್ತಕ ಬರೆದು ಮುದ್ರಣದ ಪ್ರತಿ ಹೊರತಂದಿರುವುದು ಮೆಚ್ಚುವ ವಿಷಯ ಎಂದು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸೇವಾ ಸಹಕಾರ ಸಂಘದ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ತಿಳಿಸಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಭಾನುವಾರ ಬುಳ್ಳಹಳ್ಳಿ ಗ್ರಾಮದ ಪ್ರೊ. ಎಚ್.ಗವಿಸಿದ್ದ ಅವರು ಸಣ್ಣಕಥೆಗಳನ್ನಾಧರಿಸಿದ ಬರೆದಿರುವ ಆಪ್ತಮಿತ್ರರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಗವಿಸಿದ್ದಯ್ಯ ಅವರು 75ನೇ ಇಳಿವಯಸ್ಸಿನಲ್ಲಿ ಕಥೆ ಬರೆದು ಬಿಡುಗಡೆಗೊಳಿಸುತ್ತಿರುವುದು ಅವರ ಸಾಹಿತ್ಯ ಪ್ರೇಮವನ್ನು ತೋರಿಸುತ್ತದೆ. ಅವರ ಸಾಹಿತ್ಯ ಕೃಷಿಗೆ ಎಲ್ಲರೂ ಬೆಂಬಲಿಸಬೇಕು ಎಂದರು.

ಸಾಹಿತಿ ಕೆ. ಮಹಾಲಿಂಗಯ್ಯ ಮಾತನಾಡಿ, ಆಂಗ್ಲ ಭಾಷಾ ಶಿಕ್ಷಕರಾಗಿ ನಿವೃತ್ತರಾದ ಗವಿಸಿದ್ದಯ್ಯ ಅವರು ಕನ್ನಡದಲ್ಲಿ ಕವಿತೆ ರಚಿಸಿ ಅವರ ಕನ್ನಡ ಪ್ರೇಮ ತೋರಿಸಿದ್ದು, ಇಂದು 20ನೇ ಪುಸ್ತಕ ಸಣ್ಣ ಕಥೆಗಳ ಆಪ್ತಮಿತ್ರರು ಬಿಡುಗಡೆಗೊಳಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಲೇಖಕ ಗವಿಸಿದ್ದಯ್ಯ ಮಾತನಾಡಿ, ಸಮಾಜದಲ್ಲಿ ಒಂದು ಕಾಲದಲ್ಲಿ ಲೇಖಕರಿಗೆ ಒಳ್ಳೆಯ ಗೌರವವಿತ್ತು. ಇಂದಿನ ಆಧುನಿಕ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗಿರುವ ಯುವ ಜನತೆ ಪುಸ್ತಕವನ್ನೂ ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಸಮಾಜದಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳ ಆಧಾರದಿಂದ ಕಥೆಗಳನ್ನು ರಚಿಸಿ ಸಮಾಜಕ್ಕೆ ಕೆಲವು ಸಲಹೆ ಮಾರ್ಗದರ್ಶನ ನೀಡುವ ಪ್ರಯತ್ನಕ್ಕೆ ಆಪ್ತಮಿತ್ರರ ಸಹಕಾರವಿದೆ ಎಂದರು.

ಶಿಡ್ಲಘಟ್ಟ ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಅನಂತಕೃಷ್ಣ ಮಾತನಾಡಿ, ಸಮಾಜದಲ್ಲಿ ಇತಿಹಾಸ ಓದದವ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ದಿನಪ್ರತಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ದಿನಪತ್ರಿ ಓದದವರು ಪ್ರಪಂಚ ಜ್ಞಾನವಿಲ್ಲದ ಅಂಧಕಾರಲ್ಲಿರುವವರು ಎಂದರು.

ಅಬಕಾರಿ ನಿವೃತ್ತ ಉಪನಿರೀಕ್ಷಕ ರಾಮಯ್ಯ, ಮುಖಂಡರಾದ ಚಂದ್ರಶೇಖರ್ ಹಡಪದ್, ರುದ್ರೇಶ್‌ಮೂರ್ತಿ, ಸಂಗೀತ ಮಾಸ್ಟರ್ ಗೋಪಾಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net