ಸಾಧಕರನ್ನು ಪ್ರೋತ್ಸಾಹಿಸುವ ಕೆಲಸವಾಗಲಿ

IMG-20250604-WA0292
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜೇನಹಳ್ಳಿ ಗ್ರಾಮದ ಕುರಿತಾದ ಸಾಧನೆಯ ಹಾದಿಯಲ್ಲಿ ಅಭಿವೃದ್ಧಿಯ ತೋರಣ ಎಂಬ ಕಿರು ಹೊತ್ತಗೆಯನ್ನು ಶಾಸಕ ಎಚ್.ಟಿ.ಮಂಜು ಬಿಡುಗಡೆಗೊಳಿಸಿದರು.
Published on

ಕೆ.ಆರ್.ಪೇಟೆ:  ಎಲ್ಲರಿಗೂ ಎಲ್ಲ ಕೆಲಸ ಮಾಡಲಾಗುವುದಿಲ್ಲ. ಕೆಲವರಿಗೆ ಸಾಧಿಸುವ ಮನಸ್ಸು ಮತ್ತು ಸಂಕಲ್ಪ ಎರಡೂ ಇರುತ್ತದೆ. ಅಂತಹ ವ್ಯಕ್ತಿಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ತಾಲೂಕಿನ ಬೂಕನಕೆರೆ ಹೋಬಳಿ ರಾಜೇನಹಳ್ಳಿ ಗ್ರಾಮದ ಪ್ರಗತಿಗೆ ಶ್ರಮಿಸಿದ ಕುಮಾರಸ್ವಾಮಿಯವರ ಕುರಿತಾಗಿ ಮೈಸೂರಿನ ಗರುಡ ಪ್ರೇಮ ಅರುಣ್‌ನಾಯಕ್ ಹೊರ ತಂದಿರುವ ‘ಸಾಧನೆಯ ಹಾದಿಯಲ್ಲಿ ಅಭಿವೃದ್ಧಿಯ ತೋರಣ’ ಎಂಬ ಕಿರು ಹೊತ್ತಗೆಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

ತಮ್ಮ ಹುಟ್ಟೂರು ರಾಜೇನಹಳ್ಳಿಯ ಸಮಗ್ರವಾದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಂಘಟನೆ ಮಾಡಿ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಲೋಕಸಭಾ ಸದಸ್ಯರು ಸುಮಾರು 1.29 ಕೋಟಿ ರೂ. ಅನುದಾನವನ್ನು ತಂದು ಕೇವಲ 50 ಮನೆಗಳ ಕುಗ್ರಾಮಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ. ಇವರ ಈ ಕೆಲಸ ನಮ್ಮಂತಹ ಯುವ ರಾಜಕಾರಣಿಗಳಿಗೂ ಸ್ಫೂರ್ತಿದಾಯಕವಾಗಿದೆ. ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ತನ್ನ ಹುಟ್ಟೂರಿನ ಅಭಿವೃದ್ಧಿಗೆ ತಲೆಕೆಡಿಸಿಕೊಂಡ ಕುಮಾರಸ್ವಾಮಿ ಅವರಂತಹ ಸಮಾಜಮುಖಿ ಕಾಳಜಿ ಹೊಂದಿರುವ ಯುವ ಜನರು ಇಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದ್ದಾರೆ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.

ರಾಜೇನಹಳ್ಳಿ ಕುಮಾರಸ್ವಾಮಿ ಮಾತನಾಡಿ, ನಮ್ಮ ಪರಿಶ್ರಮವನ್ನು ಕಣ್ಣಾರೆ ಕಂಡ ಮೈಸೂರಿನ ಗರುಡಪ್ರೇಮ ಅರುಣ್ ನಾಯಕ ಅವರು ಗ್ರಾಮದಲ್ಲಿ ಅನುಷ್ಠಾನವಾಗಿರುವ ಕೆಲಸ ಕಾರ್ಯಗಳನ್ನು ಸಚಿತ್ರ ಸಮೇತವಾಗಿ ಹೊರ ತಂದಿದ್ದು, ನಾಡಿನ ಯುವ ಜನರಿಗೆ ಪ್ರೇರಕ ಶಕ್ತಿಯಾಗಲಿ ಎಂಬ ಸದುದ್ದೇಶದಿಂದ ಪುಸ್ತಕ ಹೊರ ತರಲಾಗಿದೆ. ನನ್ನ ಈ ಅಳಿಲು ಸೇವೆಗೆ ಮಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರೇ ದಾರಿದೀಪವಾಗಿದ್ದಾರೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ರಾಮಚಂದ್ರನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಳವೇಗೌಡ, ಜೆಡಿಎಸ್ ಮುಖಂಡ ಕುರುಬಳ್ಳಿ ನಾಗೇಶ್, ಸೋಮಶೇಖರ್, ಗರುಡಪ್ರೇಮ ನಾಯಕ್, ಗ್ರಾಮದ ಮುಖಂಡರಾದ ಮಹೇಶ್, ಶಿವಲಿಂಗೇಗೌಡ, ಗೋಕರ್ಣ, ರಾಮಕೃಷ್ಣೇಗೌಡ, ಚೇತನ್, ರತನ್, ವೆಂಕಟರಾಮೇಗೌಡ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net