ಪ್ರವಾಸ ಕತನ ಎಂದರೆ ಜೀವನಾನುಭವಗಳ ವಿನಿಮಯದ ಸಾರ

book release
Published on

ಕಾರವಾರ : ಪ್ರವಾಸ ಕಥನಕ್ಕೆ ಶತಮಾನಗಳ ಇತಿಹಾಸವಿದೆ. ನಮ್ಮ ನಾಡಿನ ಹಲವಾರು ಮಹನೀಯರು ಕೂಡ ಪ್ರವಾಸ ಕಥನವನ್ನು ಬರೆದಿದ್ದಾರೆ. ಪ್ರವಾಸಿ ಸಾಹಿತ್ಯಕ್ಕೆ ತನ್ನದೇ ಆದ ವೈಶಿಷ್ಟ್ಯತೆಗಳಿದ್ದು, ಇದು ಪ್ರವಾಸದ ಹಾಗೂ ಜೀವನಾನುಭವಗಳ ವಿನಿಮಯಗಳ ಸಾರವಾಗಿದೆ ಎಂದು ಹಿರಿಯ ನಾಟಕಕಾರ, ಸಾಹಿತಿ ವ್ಯಾಸ್ ದೇಶಪಾಂಡೆ ನುಡಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತು, ಕಾರವಾರ ತಾಲೂಕು ಘಟಕ ಹಾಗು ಪ್ರೀತಿಪದ ಇವರ ಸಂಯುಕ್ತ ಆಶ್ರಯದಲ್ಲಿ ಕಾರವಾರದ ಲೇಖಕ ಎಂ.ಜಿ. ನಾಯ್ಕರವರ ‘ಭೂಗೋಳದ ಇನ್ನೊಂದು ಮಗ್ಗಲಲ್ಲಿ’ ಪ್ರವಾಸ ಕಥನವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಎನ್. ಜಿ. ನಾಯಕರು ಸರಕಾರಿ ಕಚೇರಿಯ ಲೆಕ್ಕಾಧಿಕಾರಿಯಾಗಿ ಅತ್ಯಂತ ಪ್ರಾಮಾಣಿಕತೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸಿದವರು. ಅವರಲ್ಲಿಯೂ ಒಬ್ಬ ಬರಹಗಾರ ಇದ್ದಾನೆ ಎಂಬುದು ಅವರ ಈ ಪ್ರವಾಸ ಕಥನದ ಮೂಲಕ ಸಾಬೀತಾದಂತಾಗಿದೆ. ಅತ್ಯಂತ ಸರಳವಾಗಿ ಹಾಗೂ ಕಾವ್ಯಾತ್ಮಕವಾಗಿ ಅವರ ಲೇಖನಗಳು ಮೂಡಿಬಂದಿದ್ದು ಅಮೇರಿಕಾದ ಹಲವು ಪ್ರವಾಸಿ ತಾಣಗಳನ್ನು ಅವರು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಪುಸ್ತಕ ಪರಿಚಯಿಸಿದ ಲೇಖಕ ಶ್ರೀಧರ ನಾಯಕ ಮಾತನಾಡಿ ಎನ್.ಜಿ. ನಾಯ್ಕರ ಪ್ರವಾಸ ಕಥನ ಸಂಗ್ರಹಯೋಗ್ಯವಾಗಿದೆ. ಅಮೇರಿಕಾದ ಹಲವು ಪ್ರೇಕ್ಷಣೀಯ ತಾಣಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಹಾಗೆ ಅವರ ಲೇಖನಗಳು ಕಾವ್ಯಾತ್ಮಕವಾಗಿರುವುದು ಕೂಡ ಒಂದು ವಿಶೇಷವಾಗಿದೆ. ಸರ್ಕಾರಿ ಕಚೇರಿಯಲ್ಲಿ ಲೆಕ್ಕ ನೋಡಿಕೊಳ್ಳುತ್ತಿದ್ದ ಎನ್.ಜಿ. ನಾಯ್ಕರು ಪುಸ್ತಕ ಪ್ರಪಂಚದಲ್ಲಿ ಬರಹಕ್ಕು ಸೈ ಎನಿಸಿಕೊಂಡಿದ್ದಾರೆ ಎಂದರು.

ಕರಾವಳಿ ಮುಂಜಾವು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಗಂಗಾಧರ ಹಿರೇಗುತ್ತಿ ಮಾತನಾಡಿ ಎನ್.ಜಿ. ನಾಯ್ಕರು ಒಬ್ಬ ಆದರ್ಶ ವ್ಯಕ್ತಿತ್ವದ ಶ್ರೇಷ್ಠ ಮನುಷ್ಯ. ಅವರ ಪ್ರಜಾಸತ್ತಾತ್ಮಕವಾದ ನಿಲುವು ಹಾಗೂ ಪ್ರಗತಿಪರವಾದ ಧೋರಣೆಗಳು ಅವರ ಬರಹ ಮತ್ತು ಕೆಲಸದ ಮೂಲಕ ನಿದರ್ಶನಗೊಂಡಿವೆ. ತಾವು ಕೈಗೊಂಡ ಅಮೇರಿಕಾದ ಪ್ರವಾಸವನ್ನು ಗ್ರಂಥ ರೂಪದಲ್ಲಿ ಪ್ರಕಟಿಸಿರುವುದು ಸ್ತುತ್ಯಾರ್ಹ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಹಿರಿಯ ಲೇಖಕ ಕೃಷ್ಣಾ ನಾಯಕ ಹಿಚ್ಕಡ್, ಹಾಗೂ ಲೇಖಕಿ ಪ್ರೇಮಾ ಟಿ.ಎಮ್.ಆರ್ ರವರು ಎನ್. ಜಿ. ನಾಯ್ಕರ ಸರಳತೆ , ಸಹೃದಯತೆ ಹಾಗೂ ಸಾಹಿತ್ಯ ಸಂಘಟನೆಗಳ ಬಗ್ಗೆ ಬಣ್ಣಿಸಿದರಲ್ಲದೇ, ಪ್ರವಾಸ ಕಥನದ ಮೂಲಕ ಅಕ್ಷರ ಲೋಕಕ್ಕೆ ಕಾಲಿರಿಸುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರವಾರ ಬೈಸಿಕಲ್ ಕ್ಲಬ್ ನ ಸೂರಜ್ ಹೆಗಡೆ, ಅವರ್ ಸೋಶಿಯಲ್ ಗುಡ್ ಸಂಘಟನೆಯ ಪವನ್ ಸಾವಂತ್ ಶುಭ ಹಾರೈಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ ಪ್ರವಾಸ ಕಥನಗಳು ತನ್ನದೇ ಆದ ಐತಿಹ್ಯವನ್ನು ಹೊಂದಿವೆ. ನಾಡಿನ ಹಲವಾರು ಮಹನೀಯರು ಪ್ರವಾಸ ಕಥನವನ್ನು ಬರೆದು ದೇಶ ವಿದೇಶಗಳ ಪ್ರವಾಸಿ ತಾಣಗಳನ್ನು ದಾಖಲಿಸಿದ್ದಾರೆ. ಇದೀಗ ದಾಖಲಾರ್ಹ ಪುಸ್ತಕಗಳ ಸಾಲಿನಲ್ಲಿ ಎನ್.ಜಿ. ನಾಯ್ಕರ ‘ಭೂಗೋಳದ ಇನ್ನೊಂದು ಮಗ್ಗುಲಲ್ಲಿ’ ಕೃತಿ ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ. ಮನುಷ್ಯ ಓದಬೇಕು. ದೇಶ ಸುತ್ತಬೇಕು. ಓದಿದ್ದನ್ನು, ನೋಡಿದ್ದನ್ನ ದಾಖಲಿಕರಿಸಬೇಕು. ದಾಖಲಿಕರಿಸದೆ ಇದ್ದರೆ ಇತಿಹಾಸಕ್ಕೆ ಅನ್ಯಾಯ ಮಾಡಿದ ಹಾಗಾಗುತ್ತದೆ. ಅಮೇರಿಕಾವನ್ನು ನಾವೊಂದು ಪ್ರೇಕ್ಷಣೀಯ ಸ್ಥಾನವಾಗಿ ಬಣ್ಣಿಸುವುದು ಸ್ವಾಗತ. ಆದರೆ ಅವರ ರಾಜನೀತಿ ಹಾಗೂ ಕೆಲವು ಅನಪೇಕ್ಷಿತ ಸಂಗತಿಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಕೂಡ ಅಷ್ಟೇ ಅನಿವಾರ್ಯ ಎಂದರು.

ಕಾರವಾರ ತಾಲೂಕ ಕಸಾಪ ಘಟಕದ ಅಧ್ಯಕ್ಷ ರಾಮಾ ನಾಯ್ಕ ಸ್ವಾಗತಿಸಿದರು. ಪ್ರೀತಿಪದ ಸಂಘಟನೆಯ ಪ್ರಧಾನ ಕಾರ್ಯದರ್ಶಿ, ಪ್ರಕಾಶಕಿ ಯಮುನಾ ಗಾಂವಕರ ಪ್ರಾಸ್ತಾವಿಕ ನುಡಿದರು. ಕಾರ್ತಿಕ್ ನಾಯ್ಕ್ ವಂದಿಸಿದರು. ಕಸಾಪ ಗೌರವ ಕಾರ್ಯದರ್ಶಿ ಗಣೇಶ ಬಿಷ್ಟನ್ನವರ್ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಬಾಬು ಶೇಖ್, ಗೌರವಕೋಶಾಧ್ಯಕ್ಷ ಶಿವಾನಂದ ತಾಂಡೇಲ ನಿವೃತ್ತ ಉಪನ್ಯಾಸಕ ಜಿ.ಡಿ. ಮನೋಜೆ ಮುಂತಾದವರು ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಚೊಚ್ಚಲ ಪುಸ್ತಕ ಪ್ರಕಟಿಸಿದ ಎನ್.ಜಿ. ನಾಯ್ಕ ಹಾಗೂ ಅವರ ಶ್ರೀಮತಿಯವರನ್ನು ಸನ್ಮಾನಿಸಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net