

ಕಂಪ್ಲಿ: ಅನುಭವದಿಂದ ಪುಸ್ತಕ ಬರೆಯುವುದು ನೈಜ ಸಾಹಿತ್ಯವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ಅಭಿಪ್ರಾಯಪಟ್ಟರು.
ಮದಿರೆ ಗ್ರಾಮದ ರವಿಚಂದ್ರ ಎ.ಬಳ್ಳಾರಿ ರಚಿಸಿದ ಯುವ ಮನಸ್ಸುಗಳ ಭಗವದ್ಗೀತೆ (ವಿ ಆರ್ ಹಿಯರ್ ಟು ವಿನ್)ಕೃತಿಯನ್ನು ಶಾಸಕರ ಕಚೇರಿಯಲ್ಲಿ ಸೋಮವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಯುವಕರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಜೀವನದಲ್ಲಿನ ಸಂಕಷ್ಟಗಳನ್ನು ಎದುರಿಸುವ ಕೌಶಲ ಗಳಿಸಲು ಸಾಧ್ಯ. ಯುವಜನತೆ ಕೇವಲ ಅಂಕ, ಉದ್ಯೋಗ ಗಳಿಕೆಯತ್ತ ಮನಸ್ಸು ಕೇಂದ್ರೀಕರಿಸದೆ ಸಾಹಿತ್ಯ ಅಧ್ಯಯನದ ಆಸಕ್ತಿ ಬೆಳೆಸಿಕೊಳ್ಳಬೇಕಿದೆ ಎಂದರು.
ಲೇಖಕ ರವಿಚಂದ್ರ ಎ.ಬಳ್ಳಾರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯಾವುದೇ ಸೋಲಿನಿಂದ ಯುವಕರ ಮನಸ್ಸು ಹತಾಶೆಗೊಳ್ಳುತ್ತಿರುವುದು ಹೆಚ್ಚುತ್ತಿದೆ. ಸೋಲು-ಗೆಲುವುಗಳಿಗಿಂತ ಪ್ರಯತ್ನ ಮುಖ್ಯ ಎನ್ನುವುದನ್ನು ಯುವಜನತೆ ಅರಿತುಕೊಳ್ಳಬೇಕು. ಈ ದಿಸೆಯಲ್ಲಿ ಸೋತಾಗ ಗೆಲುವಿನ ಕಡೆಗೆ ಸಾಗುವುದು, ಗೆದ್ದಾಗ ಅದನ್ನು ಮೊತ್ತೊಂದು ಗೆಲುವಿನತ್ತ ಸಾಗುವಂತೆ ಪ್ರೇರೇಪಿಸಲು ಯುವ ಮನಸ್ಸುಗಳ ಭಗವದ್ಗೀತೆ ಕೃತಿ ರಚಿಸಿದ್ದೇನೆ. ದೇಶದ ನಾನಾ ಕಡೆಗಳಲ್ಲಿ ಸ್ವತಃ ಸಂಚರಿಸಿ ಪಡೆದುಕೊಂಡ ಜೀವನದ ಅನುಭವವನ್ನು ಕೃತಿಯಲ್ಲಿ ದಾಖಲಿಸಿರುವುದಾಗಿ ಹೇಳಿದರು.