

ಮಂಡ್ಯ: ಮಹಾಪುರುಷರು ಮತ್ತು ಸಾಧಕರ ಜೀವನ ಚರಿತ್ರೆಯನ್ನು ಓದುತ್ತಾ ವಿದ್ಯಾರ್ಥಿಗಳು ಸಮಾಜಮುಖಿ ಬದುಕನ್ನು ರೂಪಿಸಿಕೊಂಡು ಸಾರ್ಥಕತೆ ಹೊಂದಬೇಕು ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎನ್.ವಿನಯ್‌ಕುಮಾರ್ ಸಲಹೆ ನೀಡಿದರು.
ತಾಲೂಕಿನ ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪರಿಚಯ ಪ್ರಕಾಶ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಹಾಗೂ ಕಾಲೇಜು ಆಡಳಿತ ಮಂಡಳಿ ವತಿಯಿಂದ ಆಯೋಜಿಸಿದ್ದ ‘ಪುಸ್ತಕ ಓದು ಅಭಿಯಾನ’ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದಿನ ಮಹತ್ವವನ್ನು ಅರಿಯಬೇಕು. ಪರೀಕ್ಷಾ ಪಠ್ಯದ ಜತೆಗೆ ಬದುಕನ್ನು ಕಟ್ಟಿಕೊಡಲು ಪೂರಕವಾದ ಪುಸ್ತಕಗಳನ್ನು ನಿರಂತರವಾಗಿ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಆ ಮೂಲಕ ಆದರ್ಶದ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಓದಿನಿಂದ ಜ್ಞಾನ, ಸಹನೆ, ಬದುಕಿನ ದೂರದೃಷ್ಠಿ ಮತ್ತು ಆತ್ಮವಿಶ್ವಾಸ ಮೂಡುತ್ತದೆ. ಸಾಮಾಜಿಕ ಸಾಂಸ್ಕೃತಿಕ ಪ್ರಜ್ಞೆಯನ್ನು ಹುಟ್ಟುಹಾಕುವ ಇತರೆ ಪುಸ್ತಕಗಳನ್ನು ಓದಬೇಕು. ಉನ್ನತ ಮಟ್ಟದ ಅಧಿಕಾರಿಗಳಾಗುವ ಭರವಸೆ ಹೊಂದಿರುವವರು ದಿನಪತ್ರಿಕೆಗಳನ್ನು ಕಡ್ಡಾಯವಾಗಿ ಓದುವುದರ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪರಿಚಯ ಪ್ರಕಾಶನದ ಸಂಸ್ಥಾಪಕ ಶಿವಕುಮಾರ್ ಆರಾಧ್ಯ, ಚಿತ್ರಕೂಟ ಸಂಸ್ಥೆಯ ಮುಖ್ಯಸ್ಥ ಎಚ್.ಎನ್.ಧನುಷ್‌ಗೌಡ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ಎಚ್.ಎನ್.ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕೂಟ ಸಂಸ್ಥೆಯ ಭಗವಾನ್ ಚಕ್ರವರ್ತಿ, ಪ್ರಭು, ರಾಜೇಂದ್ರ ಪ್ರಸಾದ್ ಇದ್ದರು. ಇದೇ ವೇಳೆ ಕಲಾವಿದರಾದ ದೇವರಾಜ್ ಕೊಪ್ಪ, ವೈರಮುಡಿ ಮತ್ತು ತಂಡದಿಂದ ಜಾಗೃತಿ ಗೀತೆ ಹಾಡಲಾಯಿತು.