

ತುಮಕೂರು: ಕೆಲವು ಮಕ್ಕಳು ಬಾಲ್ಯದಿಂದಲೇ ಅಸಾಧಾರಣ ಪ್ರತಿಭೆ ಹೊಂದಿರುತ್ತಾರೆ, ಅಂತಹ ಅಪರೂಪದ ಬುದ್ಧಿಮತ್ತೆ ಹೊಂದಿರುವ ತುಮಕೂರಿನ 4 ವರ್ಷ 11 ತಿಂಗಳಿನ ಪುಟಾಣಿ ಇಶಾನಿಜೈನ್ ಭಾರತದ ಪ್ರತಿಷ್ಠಿತ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾಳೆ.
ದೊಡ್ಡಬಾಣಗೆರೆ ಸರ್ಕಾರಿ ಶಾಲೆಯ ಗಣಿತ ಶಿಕ್ಷಕ ದೇವೇಂದ್ರಕುಮಾರ್ ಹಾಗೂ ಮಾನಸ ಅವರ ಪತ್ರಿ ಇಶಾನಿ ಜೈನ್ ಡಿ. ಶಾಲೆಯ ಮೆಟ್ಟಿಲನ್ನೇ ತುಳಿದಿಲ್ಲವಾದರೂ ಐದನೇ ತರಗತಿ ಮಕ್ಕಳು ಗ್ರಹಿಸಿ, ನೆನಪಿನಲ್ಲಿಟ್ಟುಕೊಳ್ಳುವಷ್ಟು ಜ್ಞಾನವನ್ನು ಐದೇ ವರ್ಷಕ್ಕೆ ಪಡೆದಿದ್ದಾಳೆ.
ಅರಳು ಹುರಿದಂತೆ ಮಾತನಾಡುವ ಅಸಾಧಾರಣ ಪ್ರತಿಭೆ ದೇಶಕ್ಕೆ ಆಸ್ತಿಯಾಗುವಂತೆ ಐಎಎಸ್ ಮಾಡಿಸುವ ಕನಸು ಅವರ ಪಾಲಕರಿಗಿದೆ. ಶಿರಾ ತಾಲೂಕು ಕರಿದಾಸರಹಳ್ಳಿಯವರಾದ ದೇವೇಂದ್ರಕುಮಾರ್ ಹಾಗೂ ಮಾನಸ ದಂಪತಿ ತುಮಕೂರಿನಲ್ಲಿ ವಾಸವಿದ್ದು, ಕರೊನಾ ಲಾಕ್‌ಡೌನ್ ಸಮಯದಲ್ಲಿ ಮಗಳಿಗೆ ಆರಂಭಿಸಿದ ಮೊದಲ ಪಾಠ ಫಲನೀಡಿದೆ. ಒಂದೆರಡು ಬಾರಿ ಹೇಳಿಕೊಟ್ಟರೆ ಸಾಕು ತನ್ನ ಸ್ಮತಿಪಟಲದಲ್ಲಿ ಕಾಪಿಟ್ಟುಕೊಳ್ಳುವ ವಿಶೇಷ ಸಾಮರ್ಥ್ಯವಿರುವ ಇಶಾನಿ ಪ್ರಸ್ತುತ 4 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ.
ಭಾರತರತ್ನ ಪ್ರಶಸ್ತಿ ಪಡೆದಿರುವ 48 ಗಣ್ಯರ ಹೆಸರನ್ನು 1 ನಿಮಿಷದಲ್ಲಿ ಹೇಳುತ್ತಾಳೆ, ಜೈನ ಧರ್ಮಕ್ಕೆ ಸಂಬಂಧಿಸಿದ ಭಜನೆ, ಡಿವಿಜಿ ಅವರ ಕಗ್ಗ, ಹನುಮಾನ್ ಚಾಲೀಸಾಗಳನ್ನು ನಿರರ್ಗಳವಾಗಿ ಪಠಿಸುತ್ತಾಳೆ. ಹೈಸ್ಕೂಲ್ ವಿದ್ಯಾರ್ಥಿಗಳಿಗೂ ಕಬ್ಬಿಣದ ಕಡಲೆ ಎನಿಸಿರುವ ಮಗ್ಗಿ ಇಶಾನಿ ಮಾತುಗಳಲ್ಲಿ ಮಹಾಕಾವ್ಯದಂತೆ ಬರುತ್ತಿದೆ. ಶಾಲೆಯ ಮಟ್ಟಿಲನ್ನೇ ತುಳಿಯದ ಈ ಅಸಾಧಾರಣ ಪ್ರತಿಭೆಗೆ ಸಂಕಲನ, ವ್ಯವಕಲನದ ಬಗ್ಗೆಯೂ ಮಾಹಿತಿಯಿದೆ, 13ನೇ ವಯಸ್ಸಿಗೆ ಐಎಎಸ್ ಪರೀಕ್ಷೆ ಬರೆಯಲು ಯುಪಿಎಸ್‌ಸಿಯಲ್ಲಿ ವಿಶೇಷ ಅವಕಾಶವಿದ್ದು ಅದನ್ನು ಬಳಸಿಕೊಂಡು ಮಗಳನ್ನು ಭಾರತೀಯ ನಾಗರೀಕ ಸೇವೆಗೆ ಕಳುಹಿಸುವ ಕನಸು ಪೋಷಕರಿಗಿದೆ. 7 ವರ್ಷದ ಬಾಲಕಿ 5 ಸಾವಿರ ಪ್ರಶ್ನೆಗಳಿಗೆ ಉತ್ತರಿಸಿರುವುದು ಈವರೆಗಿನ ಗಿನ್ನಿಸ್ ದಾಖಲೆಯಾಗಿದ್ದು ಅದನ್ನು ಬ್ರೇಕ್ ಮಾಡುವ ಸಾಮರ್ಥ್ಯ ಕಲ್ಪತರು ನಾಡಿನ ಇಶಾನಿಗಿದೆ.
ಹೀಗಾಗಿಯೇ ಅತೀಹೆಚ್ಚು ಪ್ರಶ್ನೆಗಳಿಗೆ ಉತ್ತ್ತರಿಸಿದ ಅಸಾಧಾರಣ ಮಗು ಎಂದು ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ಸಂಸ್ಥೆಯಿಂದ ಪ್ರಮಾಣಪತ್ರ ಸಿಕ್ಕಿದೆ. ಕರ್ನಾಟಕ ಬುಕ್ ಆಫ್ ರೆಕಾರ್ಡ್‌ನಲ್ಲಿಯೂ ಈ ಅಸಾಧಾರಣ ಪ್ರತಿಭೆಯ ಪರೀಕ್ಷೆ ನಡೆಸಲಾಗಿದ್ದು ಶೀಘ್ರದಲ್ಲಿಯೇ ಪ್ರಮಾಣಪತ್ರ ಲಭಿಸಲಿದೆ.
ಹುಟ್ಟಿನಿಂದಲೂ ಕಲಿಕೆಯಲ್ಲಿ ಚುರುಕಾಗಿರುವುದನ್ನು ಗಮನಿಸಿದ್ದೆವು, ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲಿದ್ದಾಗ ಪ್ರಚಲಿತ ವಿದ್ಯಮಾನದ ಪ್ರಶ್ನೆಗಳಿಗೆ ಉತ್ತರ ತಿಳಿಸಿಕೊಟ್ಟೆವು. ಒಂದೆರಡು ದಿನ ಬಿಟ್ಟು ಕೇಳಿದಾಗ ನೆನಪಿನಲ್ಲಿಟ್ಟುಕೊಂಡು ಅವಳು ಹೇಳಿದಾಗ ನಮಗೂ ಆಶ್ಚರ್ಯವಾಯಿತು. ಸ್ನೇಹಿತರ ಸಲಹೆ ಮೇರೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ದಾಖಲೆ ನೀಡಿದ್ದೆವು.
ದೇವೇಂದ್ರಕುಮಾರ್/ಮಾನಸ ಇಶಾನಿ ಪಾಲಕರು