

ಮೈಸೂರು: ದೇಶ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದ ಈ ಸಂದರ್ಭದಲ್ಲಿ ಬಸವಣ್ಣ ಅವರ ಅರಿವು ಮತ್ತು ದಾರಿ ಜಗತ್ತಿಗೆ ಅತ್ಯಂತ ಅವಶ್ಯಕ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಬಿ.ವಿ. ವಸಂತ ಕುಮಾರ್ ಅಭಿಪ್ರಾಯಪಟ್ಟರು.
ಸಂವಹನ ಪ್ರಕಾಶನ ವತಿಯಿಂದ ನಗರದ ಜೆಎಸ್‌ಎಸ್ ಹಳೆಯ ಆಸ್ಪತ್ರೆಯ ಆವರಣದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಭಾನುವಾರ ಡಾ. ಚಂದ್ರಶೇಖರಯ್ಯ ರಚನೆಯ ‘ವ್ಯೋಮ ಮೂರುತಿ ಅಲ್ಲಮ’ ಮತ್ತು ‘ಜಗದ ನಂಟ’ ಕೃತಿಗಳ ಬಿಡುಗಡೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದರು.
ಬಿಜ್ಜಳ ಯುದ್ಧಕ್ಕೆ ಹೊರಡುವ ಸಂದರ್ಭ ಬಸವಣ್ಣ ಅವರ ಬಳಿ ಅಭಿಪ್ರಾಯ ಕೇಳುತ್ತಾರೆ. ‘ಸಾಮ್ರಾಜ್ಯದಲ್ಲಿ ಸುಖ, ಶಾಂತಿ ನೆಲೆಸಬೇಕಾದರೆ ಯುದ್ಧದ ಭೀತಿ ಇರಲೇ ಬಾರದು’ ಎಂದು ಬಸವಣ್ಣ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಪ್ರಸ್ತುತ ರಷ್ಯಾ-ಯೂಕ್ರೇನ್, ಇಸ್ರೇಲ್-ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ ಬಸವ ಪ್ರಜ್ಞೆ ಹಾಗೂ ಡಾ.ಚಂದ್ರಶೇಖರಯ್ಯ ರಚಿಸಿದ ಕಾದಂಬರಿಗಳು ಕೇವಲ ಮನರಂಜನೆ ಮಾತ್ರವಲ್ಲದೆ ಅದು ನಮ್ಮ ಮನಪರಿವರ್ತನೆಗೆ ಪ್ರೇರಣೆಯಾಗಬಲ್ಲದು ಹಾಗೂ ಆತ್ಮಕಲ್ಯಾಣಕ್ಕೆ ದಾರಿ ತೋರಬಹುದು ಎಂದು ಅಭಿಪ್ರಾಯಪಟ್ಟರು.
ಬಾಗೇವಾಡಿಯ ಅಗ್ರಹಾರದಲ್ಲಿ ಬಸವಣ್ಣ ಹಾಗೂ ಬಸವಣ್ಣ ಅವರ ಶಿಕ್ಷಕರೊಬ್ಬರ ನಡುವೆ ಗಂಭೀರವಾದ ಚರ್ಚೆ ನಡೆಯುತ್ತದೆ. ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವೆ ಚರ್ಚೆ ನಡೆಯದೆ ಹೋದರೆ ಹೊಸ ಸಾಧ್ಯತೆಗಳು ಹುಟ್ಟಿಕೊಳ್ಳಲು ಸಾಧ್ಯ ಇಲ್ಲ. ಆದರೆ, ಪ್ರಸ್ತುತ ವಿಶ್ವವಿದ್ಯಾಲಯ, ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವತಂತ್ರ ಚಿಂತಕರನ್ನಾಗಿ ರೂಪಿಸುತ್ತಿಲ್ಲ. ಹಾಗಾಗಿ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ನಾವು ಬಯಸಿದ ಸುಧಾರಣೆಗಳನ್ನು ತರಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಮಾಜಿ ಅಧ್ಯಕ್ಷ ನಂದೀಶ್ ಹಂಚೆ ಮಾತನಾಡಿ, ಪುರಾಣವನ್ನು ಕಾದಂಬರಿ ಮಾಡುವುದು ಕಷ್ಟವೇನು ಅಲ್ಲ. ಆದರೆ ಐತಿಹಾಸಿಕ ಘಟನೆಯನ್ನು ಕಾದಂಬರಿಯನ್ನಾಗಿಸುವುದು ಬಹಳ ಕಷ್ಟದ ಕೆಲಸ. ಐತಿಹಾಸಿಕ ಘಟನೆ ಕುರಿತು ಕಾದಂಬರಿ ರಚಿಸುವ ಸಂದರ್ಭದಲ್ಲಿ ಐತಿಹಾಸಿಕ ಘಟನೆಗೆ ಧಕ್ಕೆ ಆಗದ ರೀತಿಯಲ್ಲಿ ಕೃತಿ ರಚಿಸಬೇಕು. ಇದು ಸವಾಲಿನ ಕೆಲಸ. ಈ ಸವಾಲನ್ನು ಡಾ. ಚಂದ್ರಶೇಖರಯ್ಯ ಸಮರ್ಥವಾಗಿ ಎದುರಿಸಿದ್ದಾರೆ ಎಂದು
ಕೃತಿ ಬಿಡುಗಡೆ ಮಾಡಿದ ಶ್ರೀ ಕುಂದೂರು ಮಠದ ಅಧ್ಯಕ್ಷ ಡಾ. ಶ್ರೀ ಶರತ್‌ಚಂದ್ರ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಪುಸ್ತಕ ಓದುಗರ ಸಂಖ್ಯೆ ಕಡಿಮೆ ಆಗುತ್ತಿರುವುದು ಬೇಸರದ ಸಂಗತಿ. ಎಲ್ಲರು ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲೂ ಮೈಸೂರಿನಲ್ಲಿ ಪುಸ್ತಕ ಓದುವವರು ಇದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮೈಸೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿರುವುದು ಸಂತಸದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
12ನೇ ಶತಮಾನದಲ್ಲಿ ಬಸವಣ್ಣ ಎದುರಿಸಿದ ಸಮಸ್ಯೆಗಳು ಇಂದಿಗೂ ಕಾಣಬಹುದು. ನಮಗೆ ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನು ಐತಿಹಾಸಿಕ ಕಾದಂಬರಿಗಳು ನೀಡುತ್ತವೆ. ಐತಿಹಾಸಿಕ ಕಾದಂಬರಿ ರಚಿಸುವುದು ಅತ್ಯಂತ ಕಷ್ಟದ ಕೆಲಸ. ಐತಿಹಾಸಿಕ ಕಾದಂಬರಿ ರಚನೆ ಸಂದರ್ಭ ಐತಿಹಾಸಿಕ ಘಟನೆ ಧಕ್ಕೆ ಆಗದ ರೀತಿಯಲ್ಲಿ ರಚಿಸುವುದು ಸವಾಲಿನ ವಿಚಾರ ಎಂದರು.
ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ, ಸಾಹಿತಿ ಡಾ.ಸಿ.ಪಿ. ಕೃಷ್ಣ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ಕೃತಿಯ ಕರ್ತೃ ಡಾ. ಚಂದ್ರಶೇಖರಯ್ಯ, ಸಂವಹನ ಪ್ರಕಾಶನದ ಪ್ರಕಾಶಕ ಡಿ.ಎನ್. ಲೋಕಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಎಸ್. ಶಿವಮೂರ್ತಿ ಕಾನ್ಯ ಹಾಗೂ ಇತರರು ಇದ್ದರು.