ಡೆಪ್ಯೂಟಿ ಚನ್ನಬಸಪ್ಪನವರಿಂದ ಕನ್ನಡಕ್ಕೆ ಭದ್ರ ಬುನಾದಿ

6 Dwd 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಡೆಪ್ಯೂಟಿ ಚನ್ನಬಸಪ್ಪನವರು ಡೆಪ್ಯೂಟಿ ಎಜುಕೇಷನಲ್ ಇನ್‌ಸ್ಪೆಕ್ಟರ್ ಹುದ್ದೆಯಲ್ಲಿದ್ದರು. ಎಲ್ಲ ವಿಷಯಗಳನ್ನು ಕನ್ನಡದಲ್ಲಿ ಬೋಽಸಲು ಕನ್ನಡ ಪಂಡಿತರಿ0ದ ಪಠ್ಯಪೂರಕ ಸಾಮಗ್ರಿ ರಚಿಸಿ ಪ್ರಾಥಮಿಕ ಶಾಲೆಗಳಿಗೆ ಪೂರೈಸಿ ಕನ್ನಡ ಕಲಿಕೆಗೆ ಭದ್ರ ಬುನಾದಿ ಹಾಕಿದ್ದರು. ಆಡಳಿತದಲ್ಲಿ ಕನ್ನಡ ಭಾಷೆ ಅನುಷ್ಠಾನ ಮತ್ತು ಸುಧಾರಣಾ ಕ್ರಮಗಳು ಶ್ಲಾಘನೀಯ ಎಂದು ಶಾಲಾ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಹೇಳಿದರು.

ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ `ಧಾರವಾಡದ ಶಾಲಾಶಿಕ್ಷಣ ಸಂಕಥನ' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಧಾರವಾಡದ ಗಂಡು ಮಕ್ಕಳ ಸರ್ಕಾರಿ ಟ್ರೇನಿಂಗ್ ಕಾಲೇಜಿನ ಪ್ರಥಮ ಪ್ರಿನ್ಸಿಪಾಲರಾಗಿ, ಶಿಕ್ಷಣ ಇಲಾಖೆಯ ಸುದ್ದಿ- ಸಮಾಚಾರಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕೆಂಬ ಮಹದಾಸೆ ಅವರದಾಗಿತ್ತು. ಮುದ್ರಣ ಯಂತ್ರ, ಇಂಟರ್‌ನೆಟ್, ಕಂಪ್ಯುಟರ್ ಇಲ್ಲದ ಸಂದರ್ಭದಲ್ಲಿ ಕೈಯಿಂದ ಬರೆದು 1865ರಲ್ಲಿ `ಮಠ' ಪತ್ರಿಕೆ ಆರಂಭಿಸಿದರು. ಇಂಥ ಐತಿಹಾಸಿಕ ಘಟನೆಗಳು ಕೃತಿಯಲ್ಲಿ ಅಡಕವಾಗಿವೆ ಎಂದರು.

ಪುಸ್ತಕ ಲೋಕಾರ್ಪಣೆ ಮಾಡಿದ ಐಐಟಿ ಡೀನ್ ಮತ್ತು ಹಿರಿಯ ವಿಜ್ಞಾನಿ ಪ್ರೊ. ಎಸ್.ಎಂ. ಶಿವಪ್ರಸಾದ್ ಮಾತನಾಡಿ, ಇಂದಿನ ವಿಜ್ಞಾನ ಯುಗದಲ್ಲಿ ನ್ಯಾನೋ ಟೆಕ್ನಾಲಜಿ, ಬಯೋ ಟೆಕ್ನಾಲಜಿ, ಕೃತಕ ಬುದ್ಧಿಮತ್ತೆ ನಿರ್ಣಾಯಕ ಪಾತ್ರ ವಹಿಸುತ್ತಿವೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಸಿದ್ದರಾಮ ಮನಹಳ್ಳಿ ಪುಸ್ತಕ ಪರಿಚಯ ಮಾಡಿದರು. ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ ಹಾಗೂ ಡಾ. ಎಚ್.ಎಫ್. ಕಟ್ಟಿಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ ಸಂಸ್ಥಾಪಕ ಸದಸ್ಯ ಶಿವಶಂಕರ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗದಗ- ಡಂಬಳ ತೋಂಟದಾರ್ಯ ಮಠದ ಶ್ರೀ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಂತಲಾ ಹಿರೇಮಠ, ಎಂ.ಎA. ಚಿಕ್ಕಮಠ, ಜಯಶ್ರೀ ಕಾರೇಕರ, ಡಯಟ್‌ನ ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು.

ಹೇಮಂತ ಲಮಾಣಿ ಪ್ರಾರ್ಥಿಸಿದರು. ಎಸ್.ಬಿ. ಕೊಡ್ಲಿ ಸ್ವಾಗತಿಸಿದರು. ಡಾ. ರೇಣುಕಾ ಅಮಲಝರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net