ಪುಸ್ತಕ ಬಿಡುಗಡೆ, ಉಪನ್ಯಾಸ 20ರಂದು

12 YLP 2
Published on

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಸವೋದಯ ಪ್ರೌಢಶಾಲೆಯ ಮೈದಾನದಲ್ಲಿ ಸಾವರ್ಕರ ಪ್ರತಿಮೆ ಅನಾವರಣ ಸಮಿತಿ, ಸಾವರ್ಕರ ವಿಚಾರ ಪ್ರಚಾರ ಸಮಿತಿಯ ಆಶ್ರಯದಲ್ಲಿ ವೀರ ಸಾವರ್ಕರ ಕುರಿತು ಪುಸ್ತಕ ಬಿಡುಗಡೆ, ಉಪನ್ಯಾಸ, ಬೆಳದಿಂಗಳೂಟ ಕಾರ್ಯಕ್ರಮವನ್ನು ಏ. 20ರಂದು ಸಂಜೆ 6.30ಕ್ಕೆ ಆಯೋಜಿಸಲಾಗಿದೆ ಎಂದು ಸಮಿತಿಯ ಸಂಚಾಲಕ ವಿ.ಎನ್. ಭಟ್ಟ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದ ಅವರು, ಹರಿಪ್ರಕಾಶ ಕೋಣೆಮನೆ ಅವರು ಬರೆದ ಸಾವರ್ಕರ ಸಂದೇಶ ಕೃತಿಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ರ್ಕ ಬಿಡುಗಡೆಗೊಳಿಸಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಾವರ್ಕರ ಪ್ರತಿಮೆ ಅನಾವರಣ ಸಮಿತಿಯ ಅಧ್ಯಕ್ಷ ಗಣಪತಿ ನಡಿಗೆಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ಅಜಿತ ಹನುಮಕ್ಕನವರ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ವಿವರಿಸಿದರು.

ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಮನೆ ಮನೆಗೆ ವೀರ ಸಾವರ್ಕರ ವಿಚಾರಧಾರೆ ತಲುಪಿಸುವ ನಿಟ್ಟಿನಲ್ಲಿ ಸಾವರ್ಕರ ವಿಚಾರ ಪ್ರಚಾರ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಮೆ ಆಗಬೇಕೆನ್ನುವ ಹೋರಾಟ ವಜ್ರಳ್ಳಿಯ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದೆ. ಸಾವರ್ಕರ ವಿಚಾರದ ಜಾಗೃತಿಗೆ ವ್ಯವಸ್ಥಿತ ಯೋಜನೆ ಹಾಕಿಕೊಳ್ಳಲಾಗಿದೆ. ಮೇ 28ರಂದು ಸಾವರ್ಕರ ಕುರಿತಾದ ವಿಚಾರ ಸಂಕಿರಣ ಯಲ್ಲಾಪುರದಲ್ಲಿ ನಡೆಯಲಿದೆ. ಚಿಂತಕರಾದ ಜಿ.ವಿ. ಹರೀಶ, ಮಂಜುನಾಥ ಅಜ್ಜಂಪುರ ಭಾಗವಹಿಸುವರು. ಸಾವರ್ಕರ ಅವರ ವಿಚಾರಧಾರೆ ವ್ಯಾಪಕವಾಗಿ ಜನರನ್ನು ತಲುಪಿಸುವ ಕಾರ್ಯವನ್ನು ಸಮಿತಿ ಮಾಡಲು ಬದ್ಧವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಸಾವರ್ಕರ ಪ್ರತಿಮೆ ಅನಾವರಣ ಸಮಿತಿಯ ಕಾರ್ಯದರ್ಶಿ ಮಹೇಶ ಗಾಂವ್ಕಾರ, ಪ್ರಮುಖರಾದ ಪ್ರಸಾದ ಹೆಗಡೆ, ಗಣಪತಿ ಮಾನಿಗದ್ದೆ, ವಿಶ್ವನಾಥ ಹಳೆಮನೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net