

ಮಂಡ್ಯ: ಭಾರತ 17-18ರ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿ ವೇಳೆ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ವಿಫಲವಾದ ಕಾರಣ ಹಿಂದುಳಿಯಬೇಕಾಯಿತು. ಆದರಿಂದು ತಂತ್ರಜ್ಞಾನದ ವಿಚಾರವನ್ನು ನೋಡುವುದಾದರೆ ವಿಶ್ವದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ನಮ್ಮಲ್ಲಿರುವ ಜ್ಞಾನ ಸಂಪತ್ತೇ ಕಾರಣ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಡಳಿತ ತಜ್ಞ ಬಿ.ಸಿ.ದಾಸೇಗೌಡರ ಕುಟುಂಬ ವರ್ಗ ಹಾಗೂ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ಬಿ.ಜಿ.ದಾಸೇಗೌಡ ಕೃತಿ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
17ನೇ ಶತಮಾನದಲ್ಲಿ ಭಾರತದ ಜಿಡಿಪಿ ಶೇ.23.5ರಷ್ಟಿತ್ತು. ಆ ದಿನಗಳಲ್ಲಿ 200ಕ್ಕೂ ಹೆಚ್ಚಿನ ದೇಶಗಳಿಗಿಂತ ಆರ್ಥಿಕ ಶ್ರೇಯಸ್ಸು ಹೆಚ್ಚಿನದ್ದಾಗಿತ್ತು. ಅಲ್ಲಿಯವರೆಗೂ ಜಗತ್ತು ಒಂದೇ ರೀತಿಯಲ್ಲಿ ಸಾಗುತಿತ್ತು. ನಮ್ಮ ದೇಶದಲ್ಲಿ ಜ್ಞಾನ ಹೆಚ್ಚಿತ್ತು. ಜನಗತ್ತಿನಲ್ಲಿ ಅಷ್ಟೇನೂ ಏರು ಪೇರು ಇಲ್ಲದ ಕಾರಣ ಸಮಾನವಾಗಿ ಸಾಗುತ್ತಿತ್ತು. ನಂತರದ ಕಾಲಘಟ್ಟದಲ್ಲಿ ಮೊದಲ ಕೈಗಾರಿಕಾ ಕ್ರಾಂತಿ ಪ್ರಾರಂಭವಾದಾಗ ಅದನ್ನು ಭಾರತ ಸಮರ್ಪಕವಾಗಿ ಬಳಸಿಕೊಂಡು ಹೋಗದೆ ಹಿಂದುಳಿಯಿತು ಎಂದು ವಿವರಿಸಿದರು.
ಬಳಿಕ ಬ್ರಿಟೀಷರು ಭಾರತದಲ್ಲಿ ಆಡಳಿತ ಪ್ರಾರಂಭಿಸಿದರು. 1940ರ ದಶಕದಲ್ಲಿ ಡಾ.ಕೆ.ಲೆಸ್ಲಿ ಕೋಲ್ಮನ್ ಅವರು ಮಂಡ್ಯದಲ್ಲಿ ಏಷ್ಯಾ ಖಂಡದಲ್ಲೇ ಪ್ರಥಮ ಬಾರಿಗೆ ಸರ್ಕಾರಿ ಸ್ವಾಮ್ಯದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದರು. ಅಂದು ಬೆಂಗಳೂರಿನಲ್ಲಿ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಜಿ.ದಾಸೇಗೌಡರು ಕೋಲ್ಮನ್ ಕಣ್ಣಿಗೆ ಬಿದ್ದರು. ಅವರನ್ನು ಆಗ ಮೈಷುಗರ್‌ಗೆ ಕೆಮಿಸ್ಟ್ ಆಗಿ ನೇಮಕಗೊಂಡರು. ಇವರ ಶ್ರದ್ಧೆ, ಆಸಕ್ತಿಯನ್ನು ಕಂಡ ಕೋಲ್ಮನ್ ಅವರು ಜರ್ಮನಿ, ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳಿಗೆ ಸಕ್ಕರೆ ಕಾರ್ಖಾನೆಗಳ ಸ್ಥಿತಿ, ಗತಿ, ಉತ್ಪಾದನೆ, ಆಡಳಿತ ವ್ಯವಸ್ಥೆ, ಮಾರುಕಟ್ಟೆ ವಿವಿಧ ವಿಚಾರಗಳ ಕುರಿತ ಅಧ್ಯಯನಕ್ಕಾಗಿ ಕಳುಹಿಸಿದ್ದರು. ಎಲ್ಲವನ್ನೂ ಅರಿತ ಬಿ.ಜಿ.ದಾಸೇಗೌಡರು ವಾಪಸ್ಸು ಬಂದು ಮತ್ತೆ ಕಾರ್ಖಾನೆಯಲ್ಲಿ ಕೆಲಸಕ್ಕೆ ನಿಯೋಜಿತರಾದರು. ಅವರನ್ನು 1949ರಲ್ಲಿ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾಗಿ ಕೋಲ್ಮನ್‌ರಿಂದ ನೇಮಕಗೊಳ್ಳುತ್ತಾರೆ ಎಂದು ವಿವರಿಸಿದರು.
ಗುರುಗಿಂತ ಶಿಷ್ಯ ಹೆಚ್ಚು ಬೆಳೆದಾಗ ಗುರುವಿಗೆ ಖುಷಿಯಾಗುತ್ತದೆ. ಅದರಂತೆ ಕೋಲ್ಮನ್ ಅವರಿಂದ ನಿಯೋಜಿಸಲ್ಪಟ್ಟ ದಾಸೇಗೌಡರು ಕೇವಲ ಕಾರ್ಖಾನೆಯ ಆಡಳಿತವನ್ನು ನೋಡಿಕೊಳ್ಳುವುದರಲ್ಲೇ ಕಾಲ ಕಳೆಯಲಿಲ್ಲ. ಜೊತೆಗೆ ಹತ್ತು ಹಲವು ಸಾಮಾಜಿಕ ಸೇವಾ ಕಾರ‌್ಯಗಳಲ್ಲೂ ತೊಡಗಿಸಿಕೊಂಡರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃತಿ ಬಿಡುಗಡೆ ಮಾಡಿದ ಕೃಷಿಕ್ ಫೌಂಡೇಷನ್ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಮೈಷುಗರ್‌ಗೆ ಕಬ್ಬು ಸರಬರಾಜು ಮಾಡಲು ರೈತರು ಹಗಲು ರಾತ್ರಿ ಕಾಯುತ್ತಿದ್ದರು. ಅದರಲ್ಲಿ ನಾನೂ ಕೂಡ ಒಬ್ಬನಾಗಿದ್ದೆ ಎಂದು ಅಂದಿನ ಕಾರ್ಖಾನೆಯ ಗತವೈಭವವನ್ನು ನೆನಪಿಸಿಕೊಂಡರು. ಸರ್ಕಾರ, ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಕೆಲವು ಆಂತರಿಕ ಧೋರಣೆಯಿಂದಾಗಿ ಕಾರ್ಖಾನೆ ದುಸ್ಥಿತಿಗೆ ತಲುಪಿದಾಗ ಸರ್ಕಾರ ಖಾಸಗೀಕರಣ ಮಾಡಲು ಮುಂದಾಗಿತ್ತು. ಅದನ್ನು ವಿರೋಧಿಸಿ ರೈತರು ಹೋರಾಟ ಮಾಡಿದ್ದರ ಫಲವಾಗಿ ಇದೀಗ ಸರ್ಕಾರ ಪುನಶ್ಚೇತನಕ್ಕೆ ಮುಂದಾಗಿದೆ ಎಂದು ಹೇಳಿದರು.
ಭಟ್ಟಾಚಾರ್ಯ, ಚಿಕ್ಕಣ್ಣ, ಬಾಲಸುಬ್ರಹ್ಮಣ್ಯಂ, ಮೋಹನ್‌ದಾಸ್ ಅವರಂತಹ ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಕಾರ್ಖಾನೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದಿದ್ದಾರೆ. ಸರ್ಕಾರಿ ಸ್ವಾಮ್ಯದಲ್ಲೇ ಕಾಖಾ ನೆರ್ ನಡೆಯುವಂತಾಗಬೇಕು. ಇಲ್ಲಿ ನಿಗಧಿಯಾದ ದರ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳು ಕೊಡುತ್ತವೆ. ಇದು ಜಿಲ್ಲೆಯ ರೈತರ ಹೆಮ್ಮೆಯ ವಿಷಯವಾಗಿದೆ. ಕಾರ್ಖಾನೆ ಪ್ರಾರಂಭವಾದ ಸಮಯದಲ್ಲಿ ಕೆಮಿಸ್ಟ್ ಆಗಿ ಬಂದ ದಾಸೇಗೌಡರು ನಂತರದ ದಿನಗಳಲ್ಲಿ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾಗಿ ಸುಮಾರು 16 ವರ್ಷ ಕೆಲಸ ಮಾಡಿದ್ದಾರೆ. ಇಷ್ಟು ವರ್ಷ ಜಿ.ಎಂ ಆಗಿ ಯಾರೂ ಆಡಳಿತ ಮಾಡಿಲ್ಲ ಎಂದು ಹೇಳಿದರು.
ವಿಶ್ವಮಾನವ ಕ್ಷೇತ್ರದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮೈಷುಗರ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಬಿ.ಮೋಹನ್‌ದಾಸ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ರೈತ ಮುಖಂಡ ಕೆ.ಬೋರಯ್ಯ, ಕೃತಿ ಕರ್ತೃ ಲೋಕೇಶ್ ಚಂದಗಾಲು, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಇತರರಿದ್ದರು.