ವಿದ್ಯಾವಂತರಿಂದಲೇ ಸಮಾಜದ ಅಧಃಪತನ: ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಕಳವಳ

Book launch event mandya
Published on

ಮಂಡ್ಯ: ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಿಂದಲೇ ಮೌಢ್ಯತೆ ಹೆಚ್ಚಾಗಿ ಸಮಾಜ ಅಧಃಪತನದತ್ತ ಸಾಗುತ್ತಿದೆ ಎಂದು ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಕಳವಳ ವ್ಯಕ್ತಪಡಿಸಿದರು.

ನಗರದ ಗಾಂಧಿಭವನದಲ್ಲಿ ನಿವೃತ್ತ ಪ್ರಾಂಶುಪಾಲ ತೂಬಿನಕೆರೆ ಲಿಂಗರಾಜು ಬರೆದಿರುವ ’ಮೌಢ್ಯತೆಯ ಪರಮಾವಧಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ದೇವರ ಹುಂಡಿ ಹಾಗೂ ಪೂಜೆಗೆ ಸಾಕಷ್ಟು ಹೆಚ್ಚು ಹಣ ಖರ್ಚು ಮಾಡುವ ವಿದ್ಯಾವಂತರು ದೇವಸ್ಥಾನದ ಹೊರಗೆ ಭಿಕ್ಷೆ ಬೇಡುತ್ತಾ ಹಸಿವಿನಿಂದ ಬಳಲುವವರಿಗೆ ಕಡಿಮೆ ನೀಡುತಾರೆ. ವಿದ್ಯಾವಂತರು ಮೌಢ್ಯತೆಯ ಹಿಂದೆ ಹೋಗುತ್ತಿದ್ದಾರೆ. ಹೀಗಾಗಿ ವಿದ್ಯಾವಂತರ ನಡೆ-ನುಡಿಯಲ್ಲಿ ಶುದ್ಧತೆ ಕಾಣಬೇಕು ಎಂದರು.

ತೂಬಿನಕೆರೆ ಲಿಂಗರಾಜು ಅವರು ನಮ್ಮ ಸುತ್ತಲಿನ ಜಗತ್ತಿನಲ್ಲಿ ಇಚ್ಚೆ ಮೀರಿ ಏನೆಲ್ಲ ಘಟನೆಗಳು ನಡೆಯುತ್ತಿವೆ ಎಂಬುದನ್ನು ಲೇಖನಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ನಡುವಿನ ಎಲ್ಲ ಸಂಕಟಗಳನ್ನು ತನ್ನೊಳಗೆ ಇರಿಸಿಕೊಂಡು ಕಳೆದ 30 ವರ್ಷಗಳಿಂದ ಓದುಗರ ಪತ್ರದ ಮೂಲಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಖಾವಿಧಾರಿಗಳನ್ನು ಕಂಡರೆ ಎಷ್ಟು ಸಿಟ್ಟು ಎಂಬುದು ಅವರ ಲೇಖನಗಳಲ್ಲಿ ಗೊತ್ತಾಗುತ್ತದೆ. ಮೌಢ್ಯತೆಯ ಪರಮಾವಧಿ ಎಂಬ ಶೀರ್ಷಿಕೆ ಬದಲಿಗೆ ಮೂರ್ಖತನದ ಪರಮಾವಧಿ ಎಂದು ಹೆಸರಿಸಬೇಕಿತ್ತು. ವಿಷ್ಣುವಿಗೆ ದಶಾವತಾರ ಎಂಬಂತೆ ಲಿಂಗರಾಜು ಅವರು ಈ ಕೃತಿ ಮೂಲಕ 62 ಅವತಾರಗಳನ್ನು ತಾಳಿದ್ದಾರೆ. ಒಂದೊಂದು ಅವತಾರಗಳು ಸಿಹಿ ತುತ್ತಾಗಿ ಮಾರ್ಪಡಲಿದೆ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಉಪನ್ಯಾಸಕ ಗುರುಮೂರ್ತಿ ಹಾಗೂ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾತನಾಡಿದರು. ನಿವೃತ್ತ ಅಧ್ಯಾಪಕ ಲಿಂಗಣ್ಣ ಬಂಧುಕಾರ್ ಪುಸ್ತಕ ಬಿಡುಗಡೆಗೊಳಿಸಿದರು. ತೂಬಿನಕೆರೆ ಲಿಂಗರಾಜು, ನಿವೃತ್ತ ಉಪನ್ಯಾಸಕ ಕೋಣನಹಳ್ಳಿ ಜಯರಾಂ, ನಿವೃತ್ತ ಮುಖ್ಯ ಶಿಕ್ಷಕ ಎಚ್.ವಿ.ಜಯರಾಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net