ನಮಗ್ಯಾಕೆ ಎನ್ನುವ ಮನೋಭಾವ ಬದಲಾಗಲಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಕಿವಿಮಾತು

Book launch Event mandya
Published on

ಮಂಡ್ಯ: ಸಮಾಜದಲ್ಲಿ ಒಂದು ಸಣ್ಣ ತಪ್ಪು, ಕಳ್ಳತನ, ದರೋಡೆ, ಬೆದರಿಕೆ ಪ್ರಕರಣಗಳು ಸಂಭವಿಸಿದಾಗ ಜನರು ಅದಕ್ಕೆ ಸ್ಪಂದಿಸಬೇಕು. ಪೊಲೀಸರಿಗೆ ದೂರು ನೀಡುವುದರ ಜತೆಗೆ ವಿಚಾರಣೆಗೆ ಸಹಕರಿಸಬೇಕು. ಆದರೆ, ನಮಗ್ಯಾಕೆ ಊರ ಉಸಾಬರಿ ಎಂದು ಸುಮ್ಮನಾದರೆ ಸಮಾಜ ಹಾಳಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು.

ನಗರದ ವಾರ್ತಾ ಇಲಾಖೆ ಸಭಾಂಗಣದಲ್ಲಿ ಜನಗಣ ಮುದ್ರಣ ಮತ್ತು ಪ್ರಕಾಶನದಿಂದಆಯೋಜಿಸಿದ್ದ ಸಮಾರಂಭದಲ್ಲಿ ಪೊಲೀಸ್ ಮತ್ತು ಸಮುದಾಯ-ಮಂಡ್ಯ ಜಿಲ್ಲಾ ಪೊಲೀಸ್ ವ್ಯವಸ್ಥೆ ಒಂದು ಪಕ್ಷಿನೋಟ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಾರ್ವಜನಿಕರು ಕೂಡ ಪೊಲೀಸರೇ. ನಾವು ಖಾಕಿ ಸಮವಸ್ತ್ರ ಹಾಕಿದ್ದೇವೆ. ಜನರು ಖಾಕಿ ಸಮವಸ್ತ್ರ ಹಾಕಿಲ್ಲ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ನಮ್ಮಷ್ಟೇ ಜವಾಬ್ದಾರಿ ಜನಸಾಮಾನ್ಯರಿಗೂ ಇರುತ್ತದೆ ಎಂದರು.

ಜನರ ಮನಸ್ಥಿತಿಯಂತೆ ಸಮಾಜ ಇರಲಿದೆ. ಒಂದು ಪ್ರದೇಶದಲ್ಲಿನ ಕ್ರಿಮಿನಲ್‌ಗಳನ್ನು ಆಧರಿಸಿ ಆ ಸೊಸೈಟಿ ಇರುತ್ತದೆ ಎಂದು ಜಾನ್ ಎಫ್.ಕೆನಡಿ ಹೇಳಿದ್ದಾರೆ. ಇದು ನಿಜವೂ ಹೌದು. ಜನರ ನಿರೀಕ್ಷೆಗೆ ಪೂರಕವಾಗಿ ಪೊಲೀಸರು ಇರುತ್ತಾರೆ. ಎಲ್ಲವನ್ನೂ ಒಪ್ಪಿಕೊಂಡು ಸುಮ್ಮನಿದ್ದರೆ ಪೊಲೀಸರೂ ಹಾಗೆಯೇ ಇರುತ್ತಾರೆ. ಆದರೆ, ಬದಲಾವಣೆ ನಿರೀಕ್ಷಿಸಿದರೆ ಜನರ ನಿರೀಕ್ಷೆಗೆ ತಕ್ಕಂತೆ ಪೊಲೀಸರೂ ಕಾರ್ಯ ನಿರ್ವಹಿಸುತ್ತಾರೆ. ಆಗ ಖಂಡಿತಾ ಬದಲಾವಣೆ ಆಗಲಿದೆ. ಪೊಲೀಸ್ ವ್ಯವಸ್ಥೆಯೊಂದಿಗೆ ಸಮುದಾಯದ ಸ್ಪಂದನೆ ಬಹಳ ಮುಖ್ಯ ಎಂದು ಹೇಳಿದರು.

ಖುಲಾಸೆಯಾಗುವ ಬಹುತೇಕ ಪ್ರಕರಣಗಳಲ್ಲಿ ಸಾಕ್ಷ್ಯಾಧಾರದ ಕೊರತೆಯೇ ಪ್ರಮುಖ ಕಾರಣವಾಗಿರುತ್ತದೆ. ಮಹಜರು ಸಂದರ್ಭದಲ್ಲಿ ಸಹಿ ಮಾಡಿರುವ ಸಾಕ್ಷಿಗಳು, ಕೋರ್ಟ್‌ಗೆ ಬಂದಾಗ ಸತ್ಯ ಹೇಳುವುದಿಲ್ಲ. ಇದರಿಂದ ಸಾಕ್ಷ್ಯಾಧಾರ ಒದಗಿಸುವಲ್ಲಿ ಪೊಲೀಸರು, ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದೇಳಿ ಆರೋಪಿಗಳನ್ನು ಖುಲಾಸೆ ಮಾಡಲಾಗುತ್ತಿದೆ. ಆದರೆ, ಸಾಕ್ಷಿ ಗಟ್ಟಿಯಾಗಿದ್ದರೆ ಆರೋಪಿಗಳಿಗೆ ಖಂಡಿತಾ ಶಿಕ್ಷೆಯಾಗಲಿದೆ. ಅದು ಸಾಮಾಜಿಕ ಬದಲಾವಣೆಗೂ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.

‘ಪೊಲೀಸ್ ಮತ್ತು ಮಾಧ್ಯಮ’ ಕುರಿತು ಮಾತನಾಡಿದ ಪತ್ರಕರ್ತ ನವೀನ್ ಚಿಕ್ಕಮಂಡ್ಯ, ಪೊಲೀಸರು ಮತ್ತು ಮಾಧ್ಯಮ ಸಮಾಜ ಆಧಾರದ ಸ್ತಂಭಗಳು. ಇಬ್ಬರಿಗೂ ಸಾಮಾಜಿಕ ಜವಾಬ್ದಾರಿ ಹೆಚ್ಚು. ಆದ್ದರಿಂದ ಸಮನ್ವಯತೆ ಇದ್ದಾಗ ಸಾಮಾಜಿಕ ವ್ಯವಸ್ಥೆಯ ಆರೋಗ್ಯ ಕಾಪಾಡಲು ಸಾಧ್ಯ. ಪತ್ರಕರ್ತರಿಗೆ ಪೊಲೀಸ್ ವ್ಯವಸ್ಥೆ ಮತ್ತು ಕಾನೂನಿನ ಅರಿವಿದ್ದರೆ ಜವಾಬ್ದಾರಿ ನಿರ್ವಹಣೆ ಸುಲಭ ಎಂದು ಹೇಳಿದರು.

‘ಪೊಲೀಸ್ ಮತ್ತು ನ್ಯಾಯಾಂಗ’ ಕುರಿತು ಹಿರಿಯ ವಕೀಲ ಪಿ.ನರೇಂದ್ರಕುಮಾರ್ ಮಾತನಾಡಿ, ಪೊಲೀಸ್ ಮತ್ತು ನ್ಯಾಯಾಂಗದ ಗುರಿ, ಕಾರ್ಯೋದ್ದೇಶ ಒಂದೇ ಆಗಿದೆ. ಅದು ನೊಂದ ವ್ಯಕ್ತಿಗೆ ನ್ಯಾಯ ಕೊಡಿಸುವುದು. ಆದರೆ, ಇಬ್ಬರೂ ಕರ್ತವ್ಯದ ಮಾರ್ಗ ಮಾತ್ರ ಬೇರೆ ಬೇರೆಯಾಗಿದೆ. ಪೊಲೀಸರು ತನಿಖಾ ಮಾರ್ಗವಾದರೆ, ನ್ಯಾಯಾಂಗದ್ದು ವಿಚಾರಣಾ ಮಾರ್ಗವಾಗಿದೆ ಎಂದು ಹೇಳಿದರು.

ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ ‘ಪೊಲೀಸ್ ಮತ್ತು ಸಮುದಾಯ-ಜಿಲ್ಲಾ ಪೊಲೀಸ್ ವ್ಯವಸ್ಥೆ’ ಒಂದು ಪಕ್ಷಿನೋಟ ಪುಸ್ತಕದ ಬಗ್ಗೆ ಮಾತನಾಡಿದರು. ಹಿರಿಯ ವಕೀಲ ಕೆ.ಎಸ್.ದೊರೆಸ್ವಾಮಿ, ಪುಸ್ತಕದ ಕರ್ತೃ ಕೌಡ್ಲೆ ಚನ್ನಪ್ಪ, ಜಿಲ್ಲಾ ವಾರ್ತಾಧಿಕಾರಿ ಎಚ್.ಎಸ್.ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net