ಸಾಂಸ್ಕೃತಿಕ ಪ್ರಜ್ಞೆ ಮೂಡಿಸಿರುವ ಮಂಡ್ಯದ ರಾಜಕಾರಣಿಗಳು: ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ರಾಮೇಗೌಡ ಭೈರಮಂಗಲ ಹೇಳಿಕೆ

Book launch event mandya
Published on

ಮಂಡ್ಯ: ಇತರೆ ಜಿಲ್ಲೆಯ ರಾಜಕಾರಣಿಗಳಿಗೆ ಹೋಲಿಕೆ ಮಾಡಿದರೆ ಮಂಡ್ಯದ ಜನಪ್ರತಿನಿಧಿಗಳು ಜನರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವಲ್ಲಿ ಮಾದರಿಯಾಗಿದ್ದಾರೆ ಎಂದು ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ರಾಮೇಗೌಡ ಭೈರಮಂಗಲ ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ಸಂಘದ ಖಜಾಂಚಿಯಾಗಿದ್ದ ದಿ.ಪ್ರೊ.ಎನ್.ಎಸ್.ರಮೇಶ್ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ನಿತ್ಯ ಸಚಿವ ಕೆ.ವಿ.ಶಂಕರಗೌಡ, ಸಾಹುಕಾರ್ ಚನ್ನಯ್ಯ, ಡಾ.ಜಿ.ಮಾದೇಗೌಡ, ಸಿಂಗಾರಿಗೌಡ, ಪಿ.ಎನ್.ಜವರಪ್ಪಗೌಡ, ಎಚ್.ಡಿ.ಚೌಡಯ್ಯ ಮುಂತಾದ ರಾಜಕಾರಣಿಗಳು ಜಿಲ್ಲೆಗೆ ಭದ್ರ ಬುನಾದಿ ಹಾಕಿದ್ದಾರೆ. ನಂತರ ಬಂದ ರಾಜಕಾರಣಿಗಳು ಸಹ ಅವರ ಹಾದಿಯನ್ನು ಬಿಟ್ಟು ಹೋಗಲು ಸಾಧ್ಯವಾಗಲಿಲ್ಲ. ಜನರಿಗಾಗಿ ಸಮಾಜಕ್ಕಾಗಿ ಎನ್ನುವ ನಿಲುವಿನಲ್ಲಿ ಕೆಲಸ ಮಾಡಿ ಮೇಲ್ಪಂಕ್ತಿ ಹಾಕಿದ್ದಾರೆ. ಇಂತಹ ರಾಜಕಾರಣಿಗಳು ಕರ್ನಾಟಕ ಸಂಘದ ಒಡನಾಟದಲ್ಲಿ ಇದ್ದರು. ಆ ಮೂಲಕ ಕರ್ನಾಟಕ ಸಂಘ ವಿಕಾಸ ಪೂರ್ಣವಾಗಿ ಬೆಳೆದಿದೆ ಎಂದರು.

ಜಾತ್ಯಾತೀತ ನಿಲುವನ್ನು ಇಟ್ಟುಕೊಂಡು ಹಿರಿಯರು ಕಟ್ಟಿದ ಕರ್ನಾಟಕ ಸಂಘ ರಾಜ್ಯ, ಹೊರರಾಜ್ಯ, ವಿದೇಶದಲ್ಲಿಯೂ ಪರಿಚಿತವಾಗಿ ಬೆಳೆದಿದೆ. ಜತೆಗೆ ಜನರ ಮನಸ್ಸು ಬೆಸೆಯುವ ಕೆಲಸವನ್ನು ಮಾಡುತ್ತಿದೆ. ಹೀಗೆ ಮಾಡಿದ ಕಾರ್ಯಕ್ರಮಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿರುವುದು ಐತಿಹಾಸಿಕ ಕೆಲಸ. ಜನರ ಸಾಂಸ್ಕೃತಿಕ ಪ್ರಜ್ಞೆ ರೂಪಿಸುವಲ್ಲಿ ಕರ್ನಾಟಕ ಸಂಘ ಸಾಕಷ್ಟು ಪ್ರಯತ್ನ ಮಾಡಿದೆ ಎಂಬುದನ್ನು ದಾಖಲಿಸಿದೆ. 162 ಪುಟಗಳ ಈ ಪುಸ್ತಕ ದಾಖಲೆ ಮಾತ್ರ ಅಲ್ಲ. ಮಾಹಿತಿ ಕೋಶ ಹಾಗೂ ಕೈಪಿಡಿಯಂತಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಕರ್ನಾಟಕ ಸಂಘ 30ಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳನ್ನು ನೀಡುವ ಮೂಲಕ ಪ್ರಖ್ಯಾತಿ ಪಡೆದಿದೆ. ಕಳೆದ 30 ದಶಕದಿಂದ ಜಿಲ್ಲೆಯಲ್ಲಿ ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಯಲ್ಲಿ ಕರ್ನಾಟಕ ಸಂಘ ಇಡೀ ರಾಜ್ಯಕ್ಕೆ ಮಾದರಿಯಾಗಿ ರೂಪುಗೊಂಡಿದ್ದು, ಸಾಂಸ್ಕೃತಿಕ ಕ್ಷೇತ್ರದ ಅಗ್ರಗಣ್ಯ ರೂವಾರಿಯಾಗಿರುವ ಕರ್ನಾಟಕ ಸಂಘಕ್ಕೆ ಈ ಬಾರಿಯ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್.ವಿ.ಜಯರಾಂ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಪ್ರಧಾನ ಕಾರ್ಯದರ್ಶಿ ಹರೀಶ್‌ಕುಮಾರ್, ಕೃತಿಯ ಸಂಪಾದಕ ಲೋಕೇಶ್ ಚಂದಗಾಲು, ಎಂ.ಯು.ಶ್ವೇತಾ ಇದ್ದರು.

ಇದೇ ವೇಳೆ ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ಸಂಪಾದಕತ್ವದ ಕರ್ನಾಟಕ ಸಂಘ ಮಂಡ್ಯ: ಪ್ರಶಸ್ತಿಗಳು- ಪುರಸ್ಕೃತರು-ಕಾರ್ಯಕ್ರಮಗಳು ಪುಸ್ತಕ ಬಿಡುಗಡೆ ಮಾಡಲಾಯಿತು. ಎನ್.ಎಸ್ ರಮೇಶ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net