ವೃತ್ತಿ ಜೀವನದ ಬರವಣಿಗೆಯೇ ಜೀವನದ ಪಾಠ: ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಅಭಿಮತ

1 (3)
Published on

ಮಂಡ್ಯ: ಸಾಹಿತಿಗಳ ವೃತ್ತಿ ಜೀವನದ ಬರವಣಿಗೆಗಳು ಜೀವನದ ಪಾಠವಾಗುತ್ತವೆ. ಜೀವರಹಿತವಾದ ಬೆಳವಣಿಗೆಯ ಸಂದರ್ಭದಲ್ಲಿ ಸಾಹಿತ್ಯ ಬದುಕಿಗೆ ಚೈತನ್ಯ ತುಂಬುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಐಡಿಯಲ್ ಪಬ್ಲಿಕೇಷನ್ ಪ್ರಕಟಿತ ಕವಯತ್ರಿ ಡಾ.ಶುಭಶ್ರೀ ಪ್ರಸಾದ್ ಅವರ ‘ಬ್ಯಾಂಕರ್ಸ್ ಡೈರಿ’ ಮತ್ತು ‘ಓದಿನ ಓದು’ ಪುಸ್ತಕ ಬಿಡುಗಡೆ ಹಾಗೂ ‘ಶ್ರೀರಂಗ’ ಆಡಿಯೋ ಆಲ್ಬಮ್ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಓದುವ, ಬರೆಯುವ, ಬೋಧಿಸುವ ವೃತ್ತಿ ಮಾಡುತ್ತಿರುವ ಕಾಲೇಜಿನ ಪ್ರಾಧ್ಯಾಪಕರ ವೃತ್ತಿ ಮತ್ತು ಪ್ರವೃತ್ತಿ ಒಂದಾಗಬೇಕು. ಆದರೆ, ಇರುವ ಸಾವಿರಾರು ಅಧ್ಯಾಪಕರಲ್ಲಿ ಬರೆಯುವ ಹವ್ಯಾಸ ಇರುವವರು ಶೇ.20ರಷ್ಟನ್ನು ಮೀರುವುದಿಲ್ಲ. ಇವರೆಲ್ಲರೂ ಸಾಹಿತ್ಯವನ್ನು ಪ್ರವೃತ್ತಿಯಾಗಿ ಬಳಸಿಕೊಂಡರೆ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರ ಭೂಪತಿ ಮಾತನಾಡಿ, ಇಂದು ಪುಸ್ತಕೋದ್ಯಮ ಸಂಕಷ್ಟದಲ್ಲಿದೆ. ಪುಸ್ತಕಗಳ ಮೇಲೂ ಜಿಎಸ್‌ಟಿ ಹಾಕುತ್ತಿರುವುದರಿಂದ ಅದರ ಹೊರೆಯನ್ನು ಲೇಖಕರು, ಓದುಗರ ಮೇಲೆ ಹಾಕಬೇಕಾದ ಬೆಳವಣಿಗೆ ಇದೆ. ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ಹಲವು ಸಭೆ, ಸಮಾರಂಭಗಳಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಪರಂಪರೆ ಬೆಳೆಯಬೇಕು. ಸರ್ಕಾರ ಪುಸ್ತಕೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ಪುಸ್ತಕಗಳನ್ನು ಕುರಿತು ನಿವೃತ್ತ ಆಂಗ್ಲ ಪ್ರಾಧ್ಯಾಪಕಿ ವಿ.ಎಸ್.ಶ್ರೀದೇವಿ ಮಾತನಾಡಿ, ಸಮಾಜ, ಸಾಹಿತ್ಯ ಬೇರೆಯಲ್ಲ. ಅವು ಒಂದೇ ನಾಣ್ಯದ ಎರಡು ಮುಖಗಳು. ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ ಇದ್ದರೆ, ಅದು ಸಮಾಜವನ್ನು ಮುಟ್ಟುತ್ತದೆ. ಶುಭಶ್ರೀಯವರ ಎರಡೂ ಪುಸ್ತಕ ಸರಳ ಭಾಷೆಯಲ್ಲಿ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ ಎಂದರು.

ಐಡಿಯಲ್ ಪಬ್ಲಿಕೇಶನ್‌ನ ಮಾಲೀಕ ಎಂ.ಎಸ್.ಶಿವಪ್ರಕಾಶ್, ಡಾ.ಶುಭಶ್ರೀ ಪ್ರಸಾದ್, ಎಂ.ಯು.ಶ್ವೇತಾ ಹಾಜರಿದ್ದರು. ಇದೇ ವೇಳೆ ಆಡಿಯೋ ಆಲ್ಬಮ್ ಅನ್ನು ಉಡುಪಿಯ ಕೊಳಲು ವಾದಕ ಕೆ.ಮುರಳೀಧರ್ ಹಾಗೂ ಸುಸ್ವರ ಸಂಗೀತ ಶಾಲೆಯ ನಿರ್ದೇಶಕಿ ರಾಧಿಕಾರಾವ್ ಬಿಡುಗಡೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net