ಅರಿವಿನ ಪ್ರಜ್ಞೆ ಜಾಗೃತವಾಗಲು ಸತ್ಸಂಗ ಅವಶ್ಯಕ: ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿಕೆ

1 (3)
Published on

ಮಂಡ್ಯ: ಒತ್ತಡ, ಒತ್ತಾಸೆಗಳಿಗೆ ಮುಖ ಮಾಡಿರುವ ಗಳಿಗೆಯಲ್ಲಿ ನಮ್ಮ ಅರಿವಿನ ಪ್ರಜ್ಞೆ ಜಾಗೃತವಾಗಲು ಪ್ರವಚನ, ಅಧ್ಯಾತ್ಮ, ಅನುಭಾವ, ಸತ್ಸಂಗಗಳು ಅವಶ್ಯಕ ಎಂದು ಬೆಳಗಾವಿ ಜಿಲ್ಲೆ ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ವೀರಶೈವ ವಿದ್ಯಾರ್ಥಿನಿಲಯದಲ್ಲಿ ಶರಣ ಸಾಹಿತ್ಯ ಪರಿಷತ್, ಜಿಲ್ಲಾ ಬಸವ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಪ್ರವಚನ ಮತ್ತು ಕೃತಿ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಶಾಂತ ಭಾವ ಬರಬೇಕಾದರೆ ಅರಿವಿನ ಪ್ರಜ್ಞೆ, ಭಾವನೆ ಜಾಗೃತವಾಗಬೇಕು. ಇಂತಹ ಎಚ್ಚರಿಸುವ ಕ್ರಿಯೆಯೇ ಅನುಭಾವ ಸತ್ಸಂಗ, ಪ್ರವಚನಗಳಾಗಿವೆ. ಬದುಕಿನಲ್ಲಿ ಯಾವುದರಿಂದ ಸುಖ ಸಿಗುವುದಿಲ್ಲವೋ ಅದರ ಹಿಂದೆ ಓಡುತ್ತಿದ್ದೇವೆ. ಶಾಂತಿ, ಸಮಾಧಾನ, ನೆಮ್ಮದಿ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಬದಲಿಗೆ ಅದು ನಮ್ಮೊಳಗೆ ಇದೆ. ಅದನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು. ಆದರೆ ಅದಿಲ್ಲ, ಇದಿಲ್ಲ ಎಂಬ ಇಲ್ಲಗಳದ್ದೇ ಚಿಂತೆಯಾಗಿರುವ ದಿನಮಾನಗಳಲ್ಲಿ ಬದುಕಿನ ಯಕ್ಷಪ್ರಶ್ನೆಗೆ ಉತ್ತರ ನಮ್ಮಲ್ಲೇ ಇದೆ ಎಂದರು.

ದಿನಬೆಳಗಾದರೆ ನಾವು ಯಾವ ಕಡೆ ಮುಖ ಮಾಡಿದ್ದೇವೆ. ಆಧುನಿಕ ಜಗತ್ತು ಬೇಕುಗಳ ಕಡೆ ಮುಖ ಮಾಡಿ ಹೊರಟಿದೆ. ಗುಬ್ಬಿ ತೋಟದಪ್ಪ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ರಾಜೇಂದ್ರ ಸ್ವಾಮೀಜಿ ಅವರು ಅಕ್ಷರ, ಜ್ಞಾನ,ಅನ್ನ ದಾಸೋಹಕ್ಕೆ ಹೆಸರಾಗಿದ್ದಾರೆ. ಇಂತಹ ಮಹಾಪುರುಷರ ಭಾವಚಿತ್ರಗಳಿಗೆ ಕೇವಲ ಹಾರ ಹಾಕಿದರೆ ಪ್ರಯೋಜನವಿಲ್ಲ. ಅದರಾಚೆಗೆ ಅವರಂತೆ ನಾನು ಹೇಗೆ ಬದಲಾಗಬೇಕು ಏನಾಗಬೇಕು ಎಂಬುದರ ಕಡೆಗೆ ಚಿಂತಿಸಬೇಕು ಎಂದು ತಿಳಿಸಿದರು.

ಸಿದ್ದೇಶ್ವರ ಸ್ವಾಮೀಜಿ ಪ್ರವಚನಗಳ ಬಗ್ಗೆ ಮಾತನಾಡಿದ ಸಾಹಿತಿ ಡಾ.ಪ್ರದೀಪಕುಮಾರ್ ಹೆಬ್ರಿ, ನಮ್ಮಲ್ಲಿ ಕಾಲಕ್ಕೆ ಅನೇಕ ಸಂತರು, ಶರಣರು, ಸದ್ಗುರುಗಳು ಇದ್ದರು. ಅವರೆಲ್ಲರೂ ಮಹಾ ಮಹಿಮರು ಎಂದು ಗುರುತಿಸಲ್ಪಟ್ಟವರು. ಅವರ ಬದುಕಿನ ರೀತಿ ನೀತಿಗಳಲ್ಲಿ ಎರಡು ಪ್ರಮುಖ ಲಕ್ಷಣಗಳಿವೆ. ಅವರೆಲ್ಲರೂ ಸತ್ಯ ಜ್ಞಾನಿಗಳು, ಸತ್ಯದರ್ಶಿಗಳು. ಬದುಕು ಶಾಂತ, ಸುಂದರ, ನಿರಾಭಾರ. ಅವರ ಜೀವನವು ಸತ್ಯಕ್ಕೆ ಮೀಸಲು. ಮುಖ್ಯವಾಗಿ ಯಾವುದೇ ಲೌಕಿಕ ಆಸೆಗೆ ಒಳಗಾದವರಲ್ಲ. ಬಯಸಿದವರೂ ಅಲ್ಲ. ಹಾಗಾಗಿ ಸಂತ ಹಾಗೂ ಮಹಂತರ ಮಾತುಗಳನ್ನು ನಮ್ಮ ಬದುಕ ದೀಪವಾಗಿ ಪರಿಗ್ರಹಿಸೋಣ. ಒಳಿತು ಕೆಡುಕುಗಳನ್ನು ಸದಾ ಚಿಂತಿಸುತ್ತಿರೋಣ ಎಂದರು.

ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಎಂ.ಬಿ.ರಾಜಶೇಖರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್, ಪ್ರತಿಭೆ ವೇದಿಕೆ ಅಧ್ಯಕ್ಷ ಎಸ್.ರಾಜರತ್ನಂ, ರುದ್ರೇಶ್ ಇದ್ದರು. ಇದೇ ವೇಳೆ ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅವರ 505ನೇ ಕೃತಿ ’ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ’ ಹಾಗೂ ’ರಾಜಗುರುತಿಲಕ’ ಮಹಾಕಾವ್ಯವನ್ನು ಮರು ಲೋಕಾರ್ಪಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net