

ಮಂಡ್ಯ: ಶರಣರ ವಚನಗಳನ್ನು ಕೇವಲ ನುಡಿಗೆ ಮಾತ್ರ ಸೀಮಿತಗೊಳಿಸಿಕೊಳ್ಳದೆ ಅದನ್ನು ನಡೆಗೂ ಅನ್ವಯಿಸಿಕೊಳ್ಳಬೇಕು ಎಂದು ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಎಂ.ಬಿ.ರಾಜಶೇಖರ್ ಹೇಳಿದರು.
ನಗರದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಜಿಲ್ಲಾ ಬಸವ ಸಮಿತಿ, ಮಂಡ್ಯ ತಾಲೂಕು ಜಗದ್ಗುರು ಬಸವೇಶ್ವರ ಸಹಕಾರ ಸಂಘ, ಕ್ರಾಂತಿಯೋಗಿ ಬಸವೇಶ್ವರ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅವರ ಶರಣ ಯುಗದ ನೇತಾರ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಸುಮಾರು ಎರಡೂವರೆ ದಶಕಗಳಿಂದ ನಿರಂತರವಾಗಿ ಬಸವಾದಿ ಶರಣರ ವಚನಗಳನ್ನು ಅನುಸಂಧಾನಿಸಿಕೊಂಡು ಬರುತ್ತಿರುವ ಡಾ.ಹೆಬ್ರಿ ಅವರು ಐನೂರಕ್ಕೂ ಹೆಚ್ಚು ಪುಸ್ತಕವನ್ನು ರಚಿಸಿದ್ದಾರೆ. ಅವುಗಳಲ್ಲಿ ನೂರಕ್ಕೂ ಹೆಚ್ಚು ಪುಸ್ತಕ ಶರಣರು ಹಾಗೂ ಶರಣ ಸಾಹಿತ್ಯಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಹೆಬ್ರಿ ಅವರ ಆತ್ಮವೇ ವಚನ ಸಾಹಿತ್ಯವಾಗಿದೆ ಎಂಬ ಅಭಿಮಾನ ನನ್ನದು ಎಂದು ಅಭಿಪ್ರಾಯಪಟ್ಟರು.
ಶರಣ ಹರಳಯ್ಯ, ಬಸವ ಶರಣ ಯುಗದ ನೇತಾರರಾಗಿದ್ದರು. ಅವರು ನಡೆ ಮತ್ತು ನುಡಿ ಸಿದ್ಧಾಂತಕ್ಕೆ ಬದ್ಧನಾಗಿ, ಕಾಯಕ ದಾಸೋಹಿಯಾಗಿ, ಅನುಭವ ಮಂಟಪದ ಪ್ರಮುಖ ಚಿಂತನಕಾರನಾಗಿ ನಿಜಶರಣನಾಗಿ ಬದುಕನ್ನು ಕಳೆದವರು. ಹರಳಯ್ಯನ ಶರಣ ಬದುಕ ಅಸ್ಮಿತೆಯನ್ನು ಹೆಬ್ರಿ ಅವರು ಈ ಕೃತಿಯಲ್ಲಿ ಗದ್ಯ- ಪದ್ಯಗಳ ಸಂಯೋಗದಲ್ಲಿ ನೀಡಿದ್ದಾರೆ. ನಾಡಿನ ಹಿರಿಯ ಬರಹಗಾರರು ಶರಣ ಹರಳಯ್ಯನಿಗೆ ಸಂಬಂಧಿಸಿದಂತೆ ಬರೆದಿರುವ ಹಲವಾರು ಮಾತುಗಳನ್ನು ಈ ಕೃತಿಯಲ್ಲಿ ದಾಖಲಿಸಿ ಈ ಕೃತಿ ಸಂಗ್ರಹಯೋಗ್ಯ ಕೃತಿಯಾಗಿಸಿದ್ದಾರೆ ಎಂದರು.
ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ, ವಕೀಲ ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್, ರಾಜಶೇಖರ್, ದರ್ಶನ್ ಇತರರಿದ್ದರು.