ಕೃತಿ ರಚಿಸುವ ಜವಾಬ್ದಾರಿ ಸಾಹಸಮಯ: ಜಿಪಂ ಸಿಇಒ ಕೆ.ಆರ್.ನಂದಿನಿ ಅಭಿಮತ

Book launch event Mandya
Published on

ಮಂಡ್ಯ: ಸಾಹಿತಿಗಳು ಕೃತಿ ರಚನೆಯಲ್ಲಿ ಅನುಭವಗಳನ್ನು ಹಿಡಿದಿಟ್ಟುಕೊಂಡು ಓದುಗರಿಗೆ ಕೊಡುವ ಜವಾಬ್ದಾರಿ ಸಾಹಸಮಯದಂತೆ ಕಾಣುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅಭಿಪ್ರಾಯಪಟ್ಟರು.

ನಗರದ ಕೆವಿಎಸ್ ಭವನದಲ್ಲಿ ಕರ್ನಾಟಕ ಸಂಘ, ಎಂ.ಎಲ್.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಕವಿತಾ ಸ್ಮಾರಕ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶ ಅಭಿವೃದ್ಧಿ ಆಗಬೇಕೆಂದರೆ ಯಾವುದೇ ಕ್ಷೇತ್ರವಿರಲಿ ಮಹಿಳೆ ಮತ್ತು ಪುರುಷರು ಸಮಾನವಾಗಿ ಕೆಲಸ ಮಾಡಿಕೊಂಡು ಹೋಗಬೇಕು. ಸವಾಲುಗಳನ್ನು ಎದುರಿಸಿಕೊಂಡು ಹೋದರೆ ಅಭಿವೃದ್ಧಿ ತಾನಾಗಿಯೇ ಆಗುತ್ತದೆ. ಸಾಹಿತಿ ಡಾ.ರಾಗೌ ಅವರು ತಮ್ಮ ಮಗಳಿಗೋಸ್ಕರ ಮತ್ತು ಅವರ ನೆನಪಿನಲ್ಲಿ ಸಾಮಾಜಿಕ ಕಳಕಳಿಯಿಂದ ವಿಭಿನ್ನವಾಗಿ ಸಮಾಜಮುಖಿ ಕೆಲಸ ಮಾಡಿಕೊಂಡು ಹೋಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು.

ಒಂದು ಕೃತಿಯನ್ನು ಬರೆಯುವುದು ಅಷ್ಟು ಸುಲಭವಲ್ಲ, ಒಬ್ಬಳು ತಾಯಿ ಪ್ರಸವ ಸಮಯದ ದಿನಗಳು ಎಷ್ಟು ಬೇಕೋ ಅಷ್ಟೇ ಸಮಯ ಹಾಗೂ ಒಂದು ವರ್ಷದಲ್ಲಿ ಹಿಡಿದಿಟ್ಟುಕೊಳ್ಳುವ ಘಟನೆಯನ್ನು ಪುಸ್ತಕದ ರೂಪದಲ್ಲಿ ತರುವುದಷ್ಟೆ ಸಮಯ ಹಿಡಿಯುತ್ತದೆ. ಹೇಮಲತಾ ಅವರು ಕೃತಿ ರಚಿಸುವಾಗ ಮಹಿಳೆ ಯಾವ ಆಯಾಮದಲ್ಲಿ ಚಿಂತನೆ ಮತ್ತು ನೋವನ್ನು ವಿಶ್ಲೇಷಣಾತ್ಮಕ ಮತ್ತು ಸಂಶೋಧನಾತ್ಮಕವಾಗಿ ಸಾರತ್ವದಿಂದ ಬರೆದಿದ್ದಾರೆ ಎಂದು ಸ್ಮರಿಸಿದರು.

ವಿಶ್ರಾಂತ ಪ್ರಾಧ್ಯಾಪಕಿ ಎಚ್.ಎಂ.ಹೇಮಲತಾ ಅವರು ಮಹಿಳಾ ಬದುಕಿನ ವಿಭಿನ್ನ ನೆಲೆಗಳು ವಿಷಯದ ಬಗ್ಗೆ ಕವಿತಾ ಸ್ಮಾರಕ ದತ್ತಿ ಉಪನ್ಯಾಸ ನೀಡಿದರು. ಸಮರ್ಥನ ಮಹಿಳಾ ವೇದಿಕೆ ಅಧ್ಯಕ್ಷೆ ನಾಗರೇವಕ್ಕ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಸಂಚಾಲಕಿ ಎಂ.ಕೆಂಪಮ್ಮ, ಸಾಹಿತಿ ಡಾ.ರಾಮೇಗೌಡ, ಕವಯಿತ್ರಿ ಭವಾನಿ ಲೋಕೇಶ್ ಭಾಗವಹಿಸಿದ್ದರು. ಇದೇ ವೇಳೆ ರೈತ ಪರ ಹೋರಾಟಗಾರ್ತಿ ಕೆ.ಯದುಶೈಲಾ ಸಂಪತ್ ಅವರಿಗೆ 15 ಸಾವಿರ ರೂ ನಗದಿನ ಜತೆಗೆ ಕವಿತಾ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net