

ಮಂಡ್ಯ: ಒಬ್ಬ ಸಮರ್ಥ ಆಡಳಿತಗಾರ ಹೇಗೆ ಆಡಳಿತವನ್ನು ನಡೆಸಬೇಕೆಂದು ಇಡೀ ದೇಶಕ್ಕೆ ಪರಿಚಯಿಸಿದ ಮಹಾನ್ ನಾಯಕ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರು ಪ್ರತಿಯೊಬ್ಬರಿಗೂ ದಾರಿದೀಪ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಶ್ಲಾಘಿಸಿದರು.
ನಗರದ ಗಾಂಧಿಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಸಹಯೋಗದಲ್ಲಿ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ, 6ನೇ ಕನ್ನಡ ಅಕ್ಷರ ಜಾತ್ರೆ, ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವರ್ಷಪೂರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಿದವರು ಒಡೆಯರ್. ರಾಜ್ಯದ ಶಿಕ್ಷಣ, ಉದ್ಯೋಗ, ಕೃಷಿ, ಕೈಗಾರಿಕೆ, ಕಾರ್ಖಾನೆ, ನೀರಾವರಿ ಅಭಿವೃದ್ಧಿಗೆ ಒಡೆಯರ್ ಅವರೇ ಕಾರಣೀಭೂತರು ಎಂದು ಬಣ್ಣಿಸಿದರು.
ಎಲ್ಲ ಕ್ಷೇತ್ರದಲ್ಲೂ ತಮ್ಮದೇ ಆದ ರೀತಿಯಲ್ಲಿ ಸಾಧನೆ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಕನ್ನಡ ಸಾಹಿತ್ಯ ಪರಿಷತ್, ಒಕ್ಕಲಿಗ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳನ್ನು ಸ್ಥಾಪಿಸಿದರು. ಶೋಷಿತ, ಹಿಂದುಳಿದ ಸಮುದಾಯದ ಏಳ್ಗೆಗೆ ಶ್ರಮಿಸಿದವರು. ಮಹನೀಯರ ಹೆಸರಿನ ಪ್ರಶಸ್ತಿಗಳನ್ನು ಪಡೆದಾಗ ಸಾಧಕರ ಗೌರವ ಹೆಚ್ಚಾಗುತ್ತದೆ. ಸಾಧಕರು ಮಹನೀಯರ ಪ್ರಶಸ್ತಿ ಪಡೆದಾಗ ಅವರ ಹೆಸರಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಹೆಜ್ಜೆ ಗುರುತು ಕೃತಿ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಡಾ.ಎಚ್.ಎಸ್.ಮುದ್ದೇಗೌಡ, ಜಿಲ್ಲೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಘೋಷಣೆಯಾಗಿ ವರ್ಷ ಕಳೆದರೂ ಸರ್ಕಾರ ಸಿದ್ಧತೆಗೆ ಒಂದು ರೂ. ಬಿಡುಗಡೆ ಮಾಡಿಲ್ಲ. ಜತೆಗೆ ದಿನಾಂಕವನ್ನೂ ನಿಗದಿ ಮಾಡಿಲ್ಲ. ಹೀಗಾದರೆ ಐದು ವರ್ಷಕೊಮ್ಮೆಯೂ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಾಡಲು ಸಾಧ್ಯವಾಗುವುದಿಲ್ಲ. ಕನ್ನಡದ ಬಗ್ಗೆ ರಾಜ್ಯ ಸರ್ಕಾರ ಇಷ್ಟೊಂದು ತಾತ್ಸಾರ ಮನೋಭಾವನೆ ವ್ಯಕ್ತಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮ್ಮೇಳನಾಧ್ಯಕ್ಷ, ಕವಿ ಹಾಗೂ ಖ್ಯಾತ ವೈದ್ಯ ಡಾ.ಚಂದ್ರಶೇಖರ್ ಮಾತನಾಡಿ, ಸಾಹಿತ್ಯದಲ್ಲಿ ಮೂರು ವಿಧಗಳಿವೆ. ಪ್ರಭೋದ, ಪ್ರಮೋದ, ಪ್ರಮಾದ ಸಾಹಿತ್ಯಗಳಿವೆ. ಪ್ರಭೋದ ಸಾಹಿತ್ಯಕ್ಕೆ ಸಾಹಿತ್ಯಾಸ್ತರು ಹೆಚ್ಚಿನ ಆದ್ಯತೆ ನೀಡಬೇಕು. ಟಿವಿ ಧಾರಾವಾಹಿಗಳಿಂದ ಸಾಹಿತ್ಯಕ್ಕೆ ಕಂಟಕ ಎದುರಾಗಿದೆ. ಮಹಿಳೆಯರು ಧಾರಾವಾಹಿಗಾಗಿ, ಊಟ, ನಿದ್ರೆ ಬಿಡುತ್ತಾರೆ. ಧಾರಾವಾಹಿಗಳಿಗೆ ಕೊಡುವಷ್ಟು ಆಸಕ್ತಿಯನ್ನು ಜನಸಾಮಾನ್ಯರು ಪುಸ್ತಕ ಓದಲು ಕೊಟ್ಟರೆ ಸಾಹಿತ್ಯ ಕ್ಷೇತ್ರ ಅಭಿವೃದ್ಧಿ ಆಗುತ್ತದೆ ಎಂದು ಕರೆ ನೀಡಿದರು.
ರಾಜ್ಯ ಆರ್‌ಟಿಒ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಸಮಾಜ ಸೇವಕಿ ಕಾವೇರಮ್ಮ, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ಪ್ರಧಾನ ಕಾರ್ಯದರ್ಶಿ ಮಂಗಲ ಶಿವಣ್ಣ, ಉಪಾಧ್ಯಕ್ಷರಾದ ರಾಗಿಮುದ್ದನಹಳ್ಳಿ ನಾಗೇಶ್, ರೂಪಾ ಹೊಸಹಳ್ಳಿ, ಕವಿಗಳಾದ ಕೊತ್ತತ್ತಿ ರಾಜು, ಕೆ.ವಿ.ರಮೇಶ್ ಕಟ್ಟೇಪುರ, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ಕನ್ನಡರತ್ನ ಪ್ರಶಸ್ತಿ ಹಾಗೂ ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.