

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಎರಡೂ ಕೃತಿಗಳು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ದೈನಂದಿನ ಪುನಃವಿಮರ್ಶೆಗೆ ಅವಕಾಶ ಮಾಡಿಕೊಡುತ್ತದೆ ಎಂದು ಮನೋವೈದ್ಯ ಹಾಗೂ ಲೇಖಕ ಡಾ.ವಿರೂಪಾಕ್ಷ ದೇವರಮನೆ ಹೇಳಿದರು.
ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಸಿಬ್ಬಂದಿ ಜ್ಞಾನ ವೃದ್ಧಿ ಕಾರ್ಯಕ್ರಮದಲ್ಲಿ, ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಆಪ್ತಸಮಾಲೋಚಕ ಡಾ.ಗುರುರಾಜ್ ಇಟಗಿ ಅವರ ‘ಓ ಮುದ್ದು ಮನಸೇ ಮತ್ತು ಸರ್ ಐ ಆಮ್ ಅಲೋನ್’ ಎರಡು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಸಮೀರ್ ಪುರಾಣಿಕ್ ಮಾತನಾಡಿ, ಎಲ್ಲ ಮಕ್ಕಳಿಗೂ ಸಮಾನ ಅವಕಾಶ ನೀಡುವುದು ಮತ್ತು ಅವರಲ್ಲಿರುವ ಪ್ರತಿಭೆ ಹೊರ ತರುವುದು ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯ. ವಿದ್ಯಾರ್ಥಿಗಳಲ್ಲಿ ಧನಾತ್ಮಕ ಗುಣ ಬೆಳೆಸುವುದು ಶಿಕ್ಷಕರ ಮೊದಲ ಅದ್ಯತೆ ಆಗಬೇಕು. ಈ ನಿಟ್ಟಿನಲ್ಲಿ ಡಾ.ಗುರುರಾಜ್ ಇಟಗಿ ಅವರ ಪುಸ್ತಕಗಳು ಸಹಕಾರಿಯಾಗಲಿವೆ ಎಂದರು.
ಮಕ್ಕಳ ಜಗಲಿಯ ಸಂಸ್ಥಾಪಕ ತಾರನಾಥ ಕೈರಂಗಳ ಮಾತನಾಡಿ, ಸರ್ ಐ ಆಮ್ ಅಲೋನ್ ಕೃತಿ ಶೈಕ್ಷಣಿಕ ಸಮಸ್ಯೆಗೆ ಪರಿಹಾರ ನೀಡಿದರೆ, ಓ ಮುದ್ದು ಮನಸೇ ಕೃತಿ ಮಕ್ಕಳು, ಪಾಲಕರು, ಶಿಕ್ಷಕರ ನಡುವೆ ಭಾವನಾತ್ಮಕ ಸಂಬಂಧ ಬೆಸೆಯುತ್ತದೆ ಎಂದು ತಿಳಿಸಿದರು.
ಲೇಖಕ ಡಾ.ಗುರುರಾಜ್ ಇಟಗಿ ಮಾತನಾಡಿದರು. ಮಂಗಳೂರಿನ ನಿಟ್ಟೆ ಪ್ರೊಫೆಷನಲ್ ಕಾಲೇಜ್ ಆಫ್ ಎಜುಕೇಶನ್ನ ಪ್ರಾಂಶುಪಾಲ ಡಾ.ಜ್ಞಾನೇಶ್ವರ್ ಪೈ ಮರೂರ್, ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ಸುಷ್ಮಾ ದಿನಕರ್, ಬಿ.ಜಿ.ವಿನಾಯಕ್, ಚಂದ್ರಿಕಾ ಭಂಡಾರಿ, ಪ್ರಕಾಶ್ ನಾಯಕ್, ಮೋಹನ್ ದಾಸ್ ಮೊದಲಾದವರು ಉಪಸ್ಥಿತರಿದ್ದರು.
ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲ್ ಸ್ವಾಗತಿಸಿದರು. ಪ್ರಾಧ್ಯಾಪಕ ಸುರೇಶ್ ರಾವ್ ಅತ್ತೂರು ಕಾರ್ಯಕ್ರಮ ನಿರೂಪಿಸಿದರು.
ಕೃತಿಗಳು ಇವತ್ತಿನ ಕಾಲಘಟ್ಟದಲ್ಲಿ, ಪಾಲಕರು, ಮಕ್ಕಳು ಮತ್ತು ಶಿಕ್ಷಕರು ಅನುಭವಿಸುತ್ತಿರುವ ಸವಾಲುಗಳನ್ನು ನೈಜ ಘಟನೆಗಳೊಂದಿಗೆ ತೆರೆದಿಡುವುದರಿಂದ ಹಲವಾರು ಓದುಗರ ಮೆಚ್ಚುಗೆ ದೊರೆತಿದೆ. ಈ ಪುಸ್ತಕ ಹೊರತರಲು ಜತೆಯಾದ ಎಲ್ಲರಿಗೂ ನಾನು ಆಭಾರಿ. ಡಾ.ಗುರುರಾಜ್ ಇಟಗಿ, ಲೇಖಕ