ಮೊಗೇರ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

12adarshkdga1
Published on

ಮಡಿಕೇರಿ: ಕೊಡಗು ಜಿಲ್ಲಾ ಮೊಗೇರ ಸಮಾಜದ ವತಿಯಿಂದ ಮೊಗೇರ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು.


ನಗರದ ಬಾಲಭವನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೊಗೇರ ಸಮಾಜದ ಗೌರವಾಧ್ಯಕ್ಷ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪಿ.ಎಂ.ರವಿ, ಮೊಗೇರ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಪಾಲಕರು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಮೊಗೇರ ಸಮಾಜದ ಅಭ್ಯುದಯಕ್ಕೆ ಕಾರಣಕರ್ತರಾಗಬೇಕು ಎಂದು ಕರೆ ನೀಡಿದರು.


ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಇತ್ತೀಚಿನ ದಿನಗಳಲ್ಲಿ ಮೊಗೇರ ಸಮಾಜ ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿರುವುದು ಶ್ಲಾಘನೀಯವೆಂದು ಹೇಳಿದರು.


ಮುಂದಿನ ದಿನಗಳಲ್ಲಿ ಮೊಗೇರ ಜನಾಂಗದ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಸಮಾಜದ ಸಾಧನೆಗೆ ಕಾಳಜಿ ವಹಿಸಲಾಗುವುದು. ಮೊಗೇರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮಾಡುವುದು ಮತ್ತು ಸರ್ಕಾರದಿಂದ ಶಿಕ್ಷಣಕ್ಕೆ ದೊರೆಯುವ ಸೌಲಭ್ಯವನ್ನು ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ರವಿ ತಿಳಿಸಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸ್ಥಾಪಕ ಸಲಹೆಗಾರ ಪಿ.ಕೆ.ಬಾಬು, ವಿದ್ಯಾರ್ಥಿಗಳು ದುಶ್ಚಟದಿಂದ ದೂರ ಉಳಿಯಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಉನ್ನತ ಶಿಕ್ಷಣದ ಮೂಲಕ ಉನ್ನತ ಹುದ್ದೆಯನ್ನು ಅಲಂಕರಿಸಿ ಮೊಗೇರ ಸಮಾಜ ಮತ್ತು ಪಾಲಕರಿಗೆ ಕೀರ್ತಿ ತಂದುಕೊಡಬೇಕೆಂದು ಕಿವಿಮಾತು ಹೇಳಿದರು.


ಫೀ.ಮಾ.ಕಾರ್ಯಪ್ಪ ಕಾಲೇಜಿನ ದೈಹಿಕ ಪ್ರಾಧ್ಯಾಪಕ ರಮೇಶ್.ಪಿ.ಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊಗೇರ ಸಮಾಜದ ಸೋಮವಾರಪೇಟೆ ತಾಲೂಕು ಮಾಜಿ ಅಧ್ಯಕ್ಷ ಬಿ.ಎಂ.ದಾಮೋದರ, ಜಿಲ್ಲಾ ಸಮಿತಿ ಸದಸ್ಯ ಪಿ.ವಿ.ವೆಂಕಪ್ಪ, ಹಿರಿಯ ಸದಸ್ಯರಾದ ಪೊಡಿಯ ತಾಳತ್ತಮನೆ, ಸೋಮಯ್ಯ ಹೆಬ್ಬೆಟ್ಟಗೇರಿ, ಜಿಲ್ಲಾ ಉಪಾಧ್ಯಕ್ಷೆ ಚಂದ್ರಾವತಿ, ಜಿಲ್ಲಾ ಸಮಿತಿಯ ಸದಸ್ಯ ಪಿ.ಕೆ.ಚಂದ್ರು, ಸಮಾಜದ ಪ್ರಮುಖರಾದ ಪ್ರಕಾಶ್.ಪಿ.ಕೆ, ರಘು ಹೆಬ್ಬೆಟ್ಟಗೇರಿ, ರಮೇಶ್.ಪಿ.ಎಂ, ಜಯ ಹೆಬ್ಬೆಟ್ಟಗೇರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


ಒಂದನೇ ತರಗತಿಯಿಂದ ಪಿಯುಸಿವರೆಗೆ ವ್ಯಾಸಂಗ ಮಾಡುತ್ತಿರುವ ಮಡಿಕೇರಿ ತಾಲೂಕಿನ ಸುಮಾರು ೧೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net