ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Oplus_131072
ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಂಗಳವಾರ ಶಾಸಕ ಎ.ಆರ್. ಕೃಷ್ಣಮೂರ್ತಿ ಅಭಿಮಾನಿ ಬಳಗದ ವತಿಯಿಂದ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಕಂದಹಳ್ಳಿ ನಂಜುಂಡಸ್ವಾಮಿ, ಕಿನಕಹಳ್ಳಿ ಪ್ರಭುಪ್ರಸಾದ್, ಗುರುಪ್ರಸಾದ್, ಆರ್.ಪುಟ್ಟಬಸವಯ್ಯ, ನಿರಂಜನ್ ಇತರರು ಇದ್ದರು.
Published on

ಯಳಂದೂರು: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅಭಿಮಾನಿ ಬಳಗದ ವತಿಯಿಂದ ಹೊನ್ನೂರು ಗ್ರಾಮದ ಶಾಲೆಗಳಿಗೆ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಮಂಗಳವಾರ ವಿತರಣೆ ಮಾಡಲಾಯಿತು.

ಅಭಿಮಾನಿ ಬಳಗದ ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ ಮಾತನಾಡಿ, ಪ್ರತಿ ವರ್ಷವೂ ಎ.ಆರ್. ಕೃಷ್ಣಮೂರ್ತಿ ಅಭಿಮಾನಿ ಬಳಗದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರಗಳು ಹಾಗೂ ಬಡ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಲೇಖನ ಸಾಮಗ್ರಿ, ಶಾಲಾ ಬ್ಯಾಗ್ ಹಾಗೂ ಇತರ ಪರಿಕರಗಳನ್ನು ವಿತರಣೆ ಮಾಡಲಾಗುತ್ತದೆ. ಈ ಬಾರಿ ತಾಲೂಕಿನ ಹೊನ್ನೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-01 ಹಾಗೂ 02ನೇ ಶಾಲೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಇದನ್ನು ಇನ್ನೂ ಹಲವು ಶಾಲೆಗಳಿಗೆ ನೀಡುವ ಉದ್ದೇಶವಿದೆ. ಈಗಾಗಲೇ ಇದಕ್ಕೆ ಸಿದ್ಧತೆಗಳನ್ನು ನಡೆಸಿಕೊಳ್ಳಲಾಗುತ್ತಿದೆ ಎಂದರು.

ಎಆರ್‌ಕೆ ರಾಜ್ಯ ಕಂಡ ಒಬ್ಬ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಇವರ ತಂದೆ ಬಿ.ರಾಚಯ್ಯ ಸರ್ಕಾರದ ಹಲವು ಮಂತ್ರಿ ಸ್ಥಾನಗಳನ್ನು ಸಮರ್ಥವಾಗಿ ನಿರ್ವಹಿಸಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ತಂದೆಯ ಛಾಪು ಎಆರ್‌ಕೆಯವರಿಗೂ ಇದೆ. ಇವರು ಕೂಡ ಜನಾನುರಾಗಿಯಾಗಿ 19 ವರ್ಷಗಳ ನಂತರ ಮತ್ತೆ ಶಾಸಕರಾಗಿ ಕ್ಷೇತ್ರಕ್ಕೆ ಕೋಟ್ಯಂತರ ರೂ. ಅನುದಾನವನ್ನು ತಂದು ಆಸ್ಪತ್ರೆ, ಬಸ್ ನಿಲ್ದಾಣ, ರಸ್ತೆಗಳು ಸೇರಿದಂತೆ ಅನೇಕ ಮಾದರಿಯಾಗುವ ಕೆಲಸಗಳನ್ನು ಮಾಡಿದ್ದಾರೆ. ಹಾಗಾಗಿ ಇವರ ಹೆಸರಿನಲ್ಲಿರುವ ನಮ್ಮ ಬಳಗದ ವತಿಯಿಂದ ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.

ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಹೊನ್ನೂರು ಗ್ರಾಪಂ ಅಧ್ಯಕ್ಷ ಗುರುಪ್ರಸಾದ್, ತಾಪಂ ಮಾಜಿ ಅಧ್ಯಕ್ಷ ನಿರಂಜನ್, ಸದಸ್ಯರಾದ ಆರ್.ಪುಟ್ಟಬಸವಯ್ಯ, ರೂಪೇಶ್, ಮಹದೇವಸ್ವಾಮಿ, ಭಾಗ್ಯಮ್ಮ, ಕುಮಾರ್, ಜಯಮ್ಮ, ಅನಿತಾ, ರಾಧಾ ಮುಖಂಡರಾದ ವಿಜಯಕುಮಾರ್, ರಾಜೇಂದ್ರ, ಕುಮಾರ್, ಪ್ರದೀಪ್‌ಕುಮಾರ್ ಶಾಲೆಯ ಮುಖ್ಯ ಶಿಕ್ಷಕ ಶಿವಮಾದಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net