ಗಂಜಿಮಠ ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕ ವಿತರಣೆ

23-book
Published on

ಗುರುಪುರ: ಶಿಕ್ಷಣ ಹಿಂದಿನಷ್ಟು ಕಷ್ಟವಿಲ್ಲ. ಈಗ ಶಾಲಾ ಮಕ್ಕಳಿಗೆ ಸರ್ಕಾರದಿಂದ ಸವಲತ್ತುಗಳು ಸಿಗುತ್ತವೆ. ಇದರ ಹೊರತಾಗಿಯೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳು ಮಕ್ಕಳ ಶಿಕ್ಷಣಕ್ಕೆ ನಾನಾ ರೀತಿಯಲ್ಲಿ ನೆರವಾಗುತ್ತಿವೆ. ಮಕ್ಕಳು ಇದನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ಜಿಪಂ ಮಾಜಿ ಸದಸ್ಯ ಕೃಷ್ಣ ಅಮೀನ್ ಹೇಳಿದರು.

ಗಂಜಿಮಠದ ಶ್ರೀ ವಿಜಯವಾಹಿನಿ ಸಂಘಟನೆ ವತಿಯಿಂದ ಗಂಜಿಮಠದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಇತ್ತೀಚೆಗೆ ಬರೆಯುವ ಪುಸ್ತಕ ಉಚಿತ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಂಜಿಮಠ ಪಂಚಾಯಿತಿ ಅಧ್ಯಕ್ಷೆ ಮಾಲತಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ನಿವಾಸಿ ಉಮೈ ಭಾನು ಅವರ ಪುತ್ರಿ ಮದುವೆಗೆ ಆರ್ಥಿಕ ನೆರವು ಹಾಗೂ ನಿವೃತ್ತ ಶಿಕ್ಷಕಿಯರಾದ ಸುಲತಾ ಮತ್ತು ಶಾಲಿನಿ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ಆಯೋಜಿಸಲಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಗಂಜಿಮಠ ಪಂಚಾಯಿತಿ ಉಪಾಧ್ಯಕ್ಷೆ ಸಾರಮ್ಮ, ಸದಸ್ಯರಾದ ಸಾದಿಕ್ ಮತ್ತು ಲೋಹಿತಾಕ್ಷಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ, ಎಸ್‌ಡಿಎಂಸಿ ಸದಸ್ಯ ಹೈದರ್, ಉದ್ಯಮಿ ಮುಸ್ತಫ, ಅಬ್ದುಲ್ ಸಲಾಂ ಸೂರಲ್ಪಾಡಿ, ರಜಾಕ್ ಮಳಲಿ, ಬಶೀರ್ ಬಾಜಿ, ರಿಯಾಝ್, ಶ್ರೀ ವಿಜಯವಾಹಿನಿ ಪದಾಧಿಕಾರಿಗಳಾದ ದಯಾನಂದ ಮತ್ತು ಜನಾರ್ದನ ಕುಲಾಲ್ ಉಪಸ್ಥಿತರಿದ್ದರು. ಶ್ರೀ ವಿಜಯವಾಹಿನಿ ಅಧ್ಯಕ್ಷ ಸುನೀಲ್ ಗಂಜಿಮಠ ಪ್ರಸ್ತಾವನೆಗೈದರು. ಶಾಲೆಯ ಆಂಗ್ಲ ಮಾಧ್ಯಮ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ ಅಕ್ಬರ್ ಬಾದ್‌ಷಾ ಇಂಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net