

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಟ್ರಸ್ಟ್ ಮೂಲಕ ಪ್ರತಿವರ್ಷ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಪುಸ್ತಕ ವಿತರಿಸುತ್ತಾ ಬರಲಾಗಿದೆ. ಫಲಾನುಭವಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ತಲುಪಿ ಸಮಾಜ, ದೇಶಕ್ಕೆ ಕೀರ್ತಿ ತರುವಂತಾಗಬೇಕು ಎಂದು ಬಂಧುತ್ವ ಚಾರಿಟೆಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಹೇಳಿದರು.
ಬಂಧುತ್ವ ಚಾರಿಟೆಬಲ್ ಟ್ರಸ್ಟ್ ವತಿಯಿಂದ ತೊಕ್ಕೊಟ್ಟಿನಲ್ಲಿರುವ ಕಚೇರಿಯಲ್ಲಿ ಭಾನುವಾರ ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ವ ಧರ್ಮೀಯರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಮಾನವಾಗಿ ಜೀವನ ಸಾಗಿಸುವುದೆ ಬಂಧುತ್ವ. ಮಕ್ಕಳು ಸಮಾಜದ ಬೆಳಕಾಗಿದ್ದು ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಜೀವನ ರೂಪಿಸುವ ಕಾರ್ಯ ಮಾಡುವುದು ಪುಣ್ಯದ ಕೆಲಸ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ಲಭಿಸಿದಾಗ ಸಮಾಜ ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ಗ್ರೀನ್ ಸಿಟಿ ಅಧ್ಯಕ್ಷ ಹಂಝ, ನಾಟಿ ವೈದ್ಯ ಮೊಹಮ್ಮದ್ ಕುಂಞಿ, ಸಾಮಾಜಿಕ ಕಾರ್ಯಕರ್ತ ಅಶ್ರಫ್ ಅವರನ್ನು ಸನ್ಮಾನಿಸಲಾಯಿತು. ಅಬ್ದುಲ್ ಅಝೀಝ್ ಪುಣಚ ದುಆ ನೆರವೇರಿಸಿದರು. ಪತ್ರಕರ್ತ ಎ.ಆರ್.ಲೋಹಾನಿ ಮಳಗಿ, ಅಭಿಮೊ ಸಂಸ್ಥೆ ಅಧ್ಯಕ್ಷ ನವೀನ್ ನಾಯಕ್, ಸಮಾಜಸೇವಕ ಅಹ್ಮದ್ ಶರೀಫ್, ಬಂಧುತ್ವ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿಗಳಾದ ಅಬ್ದುಲ್ ನಝೀರ್, ಆಸಿಫ್ ಬಬ್ಬುಕಟ್ಟೆ, ಸದಸ್ಯರಾದ ಇಂತಿಯಾಝ್ ಹುಸೈನ್, ಮಕ್ಬೂಲ್, ಝೀಶಾನ್, ಝುಬೈದಾ, ಸೌಮ್ಯ, ಮೈಮೂನಾ, ಶಮೀಮಾ ಮೊದಲಾದವರು ಉಪಸ್ಥಿತರಿದ್ದರು.