

ಮಂಡ್ಯ: ಜಿಲ್ಲೆಯ ಸಾಧಕರ ಬಗ್ಗೆ ಬರೆಯುವಾಗ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಿ ಬರೆಯಬೇಕು. ಅಂತೆಯೇ ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ಪ್ರಕಟವಾಗುವ ಪುಸ್ತಕಗಳನ್ನು ನೆನಪಿನ ಕಾಣಿಕೆಯಾಗಿ ನೀಡಲಾಗುವುದು. ಅದರಂತೆ ಸಾಹಿತ್ಯ ಪರಿಷತ್‌ನ ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ನೆನಪಿನ ಕಾಣಿಕೆಯಾಗಿ ನೀಡುವ ಸಂಪ್ರದಾಯ ರೂಢಿಸಿಕೊಳ್ಳಿ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಪುಸ್ತಕ ಸಮಿತಿ ಹಾಗೂ ಸ್ಮರಣ ಸಂಚಿಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಕಟವಾಗುವ ಸ್ಮರಣ ಸಂಚಿಕೆ ಲೇಖನಗಳು ಮತ್ತು ಪುಸ್ತಕದ ವಿಷಯಗಳ ಹೊಂದಾಣಿಕೆ ದೃಷ್ಟಿಯಿಂದ ಎರಡು ಸಮಿತಿ ನಡುವೆ ಸಮನ್ವಯತೆ ಇರಲಿ ಎಂದರು.
ಸಾಹಿತ್ಯ ಸಮ್ಮೇಳನ ಪುಸ್ತಕ ಸಮಿತಿಯಿಂದ ರಚಿತವಾಗುವ 38 ಪುಸ್ತಕ, ಸ್ಮರಣ ಸಂಚಿಕೆಯಲ್ಲಿ ಲೇಖನಗಳ ವಿಷಯಗಳು ಪುನರಾವರ್ತಿತವಾಗುವುದನ್ನು ತಪ್ಪಿಸಲು ಸಮನ್ವಯತೆ ಅಗತ್ಯ. ಪುಸ್ತಕ ಸಮಿತಿಗೆ ಬರುವ ಕಡಿಮೆ ಪುಟಗಳ ಲೇಖನಗಳು ಸೂಕ್ತವಾಗಿದ್ದರೆ, ಸ್ಮರಣ ಸಂಚಿಕೆಗೆ ಆಯ್ಕೆ ಮಾಡಿಕೊಳ್ಳಬಹುದು. ಅಂತೆಯೇ ಸಮ್ಮೇಳನದ ಸಮಿತಿಗಳ ಸಭೆಯ ಕಲಾಪಗಳ ವರದಿಯನ್ನು ವಿಸ್ತೃತವಾಗಿ ಪ್ರತಿನಿತ್ಯ ಪ್ರಕಟಿಸುತ್ತಿರುವ ಮಾಧ್ಯಮದವರನ್ನು ವಿಶೇಷವಾಗಿ ಶ್ಲಾಘಿಸಿದ ಜೋಶಿ, ಮುಂದೆಯೂ ಇದೇ ರೀತಿ ಸಹಕಾರ ಇರಲಿ ಎಂದು ಆಶಿಸಿದರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇದಕ್ಕೆ ದನಿಗೂಡಿಸಿದರು.
ಕಸಾಪ ಕಾರ್ಯದರ್ಶಿ ಪದ್ಮಿನಿ ನಾಗರಾಜು ಮಾತನಾಡಿ, ಪುಸ್ತಕ, ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗುವ ಲೇಖನದಲ್ಲಿ ಯಾವುದೇ ವಿವಾದಿತ ಅಂಶ ಇರದಂತೆ ಸಂಪಾದಕ ಮಂಡಳಿ ಗಮನಿಸಬೇಕು. ಜತೆಗೆ ವಿಷಯಗಳಿಗೆ ಸಂಬಂಧಿಸಿದಂತೆ ಮುಂದೆ ಏನಾದರೂ ವಿವಾದ ಉಂಟಾದರೆ ಆಯಾ ಲೇಖಕರನ್ನು ಹೊಣೆಗಾರರನ್ನಾಗಿ ಮಾಡಬೇಕು. ಕವನ ಹಾಗೂ ಕಥೆಗಳ ಪ್ರಕಟಣೆಗೆ ಲೇಖಕರ ಅನುಮತಿ ಪಡೆಯಬೇಕು. ಹಿಂದಿನ ಸಮ್ಮೇಳನದಲ್ಲಿ ಇಂತಹ ಸಮಸ್ಯೆ ಉದ್ಭವಿಸಿದೆ ಎಂದು ಹೇಳಿದರು.
ಪುಸ್ತಕ ಸಮಿತಿ ಅಧ್ಯಕ್ಷ ಪ್ರೊ.ಎಚ್.ಎಸ್.ಮುದ್ದೇಗೌಡ ಮಾತನಾಡಿ, ಪುಸ್ತಕ ಸಮಿತಿ ವತಿಯಿಂದ ಪ್ರಕಟವಾಗುವ ಪುಸ್ತಕಗಳಿಗೆ ಆಕರ್ಷಕ ಶೀರ್ಷಿಕೆ ನೀಡಲಾಗುವುದು. ಈಗಾಗಲೇ ಸಮಿತಿ ಮುಂದೆ ಬಂದಿರುವ ಪುಸ್ತಕಗಳ ವಿಷಯವನ್ನು ಸಭೆಯ ಗಮನಕ್ಕೆ ತಂದರು. ಜತೆಗೆ ಮಂಡ್ಯ ಮತ್ತು ನಾಲ್ವಡಿ ಕುರಿತ ಪುಸ್ತಕವೊಂದನ್ನು ಪ್ರಕಟಿಸಲಾಗುವುದು ಎಂದರು. ಪರಿಷತ್‌ನ ಪ್ರಕಟಣ ವಿಭಾಗದ ಸಂಚಾಲಕ ಎನ್.ಎಸ್.ಶ್ರೀಧರ್‌ಮೂರ್ತಿ, ಅ.30ರ ನಂತರ ಪುಸ್ತಕಗಳ ಮುದ್ರಣ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಸಾಹಿತಿ ಕಲೀಂ ಉಲ್ಲಾ, ಕಸಾಪ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ, ಕೋಶಾಧ್ಯಕ್ಷ ಪಟೇಲ್ ಪಾಂಡು, ಗ್ರಂಥಾಲಯ ಅಧಿಕಾರಿಗಳಾದ ಕೃಷ್ಣಮೂರ್ತಿ, ನಂದೀಶ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ.ಪಣ್ಣೆದೊಡ್ಡಿ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ತಾಲೂಕು ಅಧ್ಯಕ್ಷ ಚಂದ್ರಲಿಂಗು, ನಗರಾಧ್ಯಕ್ಷೆ ಸುಜಾತಾ ಕೃಷ್ಣ, ಪದಾಧಿಕಾರಿಗಳಾದ ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ಮಂಜುನಾಥ್ ಬಲ್ಲೇನಹಳ್ಳಿ, ಸುಮಾರಾಣಿ, ಭವಾನಿ ಲೋಕೇಶ್ ಇತರರಿದ್ದರು.