ಭಾರತೀಯ ಪರಂಪರೆ ಎಲ್ಲೆಡೆ ಹರಡಲಿ: ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ ಸಲಹೆ

26_12_Mdy_02(Book)
Published on

ಮಂಡ್ಯ: ಇತಿಹಾಸ ಅರಿತವನು ಮಾತ್ರ ಇತಿಹಾಸವನ್ನು ಸೃಷ್ಟಿಸಬಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿತು ಭಾರತೀಯ ಪರಂಪರೆಯನ್ನು ವಿಶ್ವದಾದ್ಯಂತ ಹರಡುವಂತೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಹೇಳಿದರು.

ನಗರದ ಕರ್ನಾಟಕ ಸಂಘದ ಆವರಣದಲ್ಲಿ ರಾಷ್ಟ್ರವಿಕಾಸ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶ್ರೀಕಾಂತ್‌ಶೆಟ್ಟಿ ಅವರ ಯಹೂದಿ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವದ ಎಲ್ಲ ದೇಶಗಳಿಗಿಂತ ಹೆಚ್ಚಿನ ಸಂಪನ್ಮೂಲ ಹೊಂದಿರುವ ಭಾರತದ ಜನತೆ ಮನಸ್ಸು ಮಾಡಿದರೆ ಎಲ್ಲ ಕ್ಷೇತ್ರಗಳಲ್ಲೂ ಉನ್ನತವಾದ ಸಾಧನೆ ಮಾಡಬಹುದು ಎಂದರು.

ಇಸ್ರೇಲ್ ದೇಶದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ರೋಚಕ ಇತಿಹಾಸವನ್ನು ದಾಖಲಿಸಿರುವ ಯಹೂದಿ ಕೃತಿ ಅತ್ಯಂತ ಪರಿಣಾಮಕಾರಿ. ಶೇ.22ರಷ್ಟು ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿರುವವರು ಪುಟ್ಟ ರಾಷ್ಟ್ರದ ಜನರು ಎನ್ನುವುದು ಶ್ಲಾಘನೀಯ. ಜಗತ್ತಿನ ಪುರಾತನವಾದ ಯಹೂದಿ ಧರ್ಮಿಯರು ತಮ್ಮ ದೇಶದ ಅಭಿವೃದ್ಧಿಗಾಗಿ ದುಡಿದ ಪರಿಯನ್ನು ಲೇಖಕರು ಬಹಳ ಅರ್ಥಪೂರ್ಣವಾಗಿ ವರ್ಣಿಸಿದ್ದಾರೆ ಎಂದರು.

ಕಾಯಕಯೋಗಿ ೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಒಂದು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಯಹೂದಿಗಳ ಸ್ವಾಭಿಮಾನ, ಹೋರಾಟದ ಕೆಚ್ಚು, ದೇಶಾಭಿಮಾನ ಭಾರತೀಯರಿಗೆ ಸ್ಫೂರ್ತಿಯಾಗಬೇಕಿದೆ. ಇಸ್ರೇಲ್ ಸ್ವಾತಂತ್ರ್ಯವನ್ನು ಪಡೆಯಲು ರಕ್ತಸಿಕ್ತ ಹೋರಾಟವನ್ನು ನಡೆಸಿ ಸಹಸ್ರಾರು ಜನರು ಬಲಿಯಾಗಿ ಹೋದ ಚರಿತ್ರೆಯನ್ನು ಯಹೂದಿ ಕೃತಿಯಲ್ಲಿ ಶ್ರೀಕಾಂತ್‌ಶೆಟ್ಟಿ ರೋಚಕವಾಗಿ ವರ್ಣಿಸಿದ್ದಾರೆ ಎಂದರು.

ಲೇಖಕ ಶ್ರೀಕಾಂತ್‌ಶೆಟ್ಟಿ ಮಾತನಾಡಿ, ರಾಷ್ಟ್ರ ನಿರ್ಮಾಣದ ಕನಸನ್ನು ಅಕ್ಷರಶಃ ಅನುಷ್ಠಾನಗೊಳಿಸಿದ ಕೀರ್ತಿಗೆ ಪಾತ್ರರಾಗಿರುವ ಇಸ್ರೇಲ್ ದೇಶದ ಯಹೂದಿಗಳ ಅಂತಃಶಕ್ತಿ ನಮಗೆಲ್ಲ ಪ್ರೇರಣೆ ಎಂದರು.

ರಾಷ್ಟ್ರವಿಕಾಸ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net