

ಮಂಡ್ಯ: ನಮ್ಮಲ್ಲಿನ ಚಿಂತನೆಯನ್ನು ವ್ಯಕ್ತಪಡಿಸುವ ಸಾಹಿತ್ಯದ ಪ್ರಕಾರವಾಗಿರುವ ಲಲಿತ ಪ್ರಬಂಧ ಹೊಸ ಯುವ ಬರಹಗಾರರನ್ನು ಆಕರ್ಷಿಸುವಂತಿರಬೇಕು ಎಂದು ಹಾಸ್ಯ ಲೇಖಕಿ ಹಾಗೂ ಮಂಗಳೂರಿನ ನಿವೃತ್ತ ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆ ಸಲಹೆ ನೀಡಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಐಡಿಯಲ್ ಪಬ್ಲಿಕೇಶನ್ಸ್ ವತಿಯಿಂದ ಹೊರತಂದಿರುವ ಲೇಖಕಿ ಡಾ.ಶುಭಶ್ರೀಪ್ರಸಾದ್ ಅವರ ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಜೀವನದಲ್ಲಿನ ಭಾರವಾದ, ಕಷ್ಟದ, ಜಂಜಾಟದ ಬದುಕನ್ನು ಸಹ ಸರಸವಾದ ಕಣ್ಣಿನಿಂದ ನೋಡಿ ಬರೆಯಲು ಸಾಧ್ಯ ಎಂಬುದನ್ನು ಲಲಿತ ಪ್ರಬಂಧಕಾರರು ತೋರಿಸಿಕೊಟ್ಟಿದ್ದಾರೆ. ಅವರ ಬರಹಗಳು ಓದುಗರನ್ನು ನೌಕಾವಿಹಾರ ಕರೆದುಕೊಂಡು ಹೋಗಿ ಬೇರೆ ದೃಶ್ಯ ವೈಭವವನ್ನು ತೋರಿಸಿ ಮತ್ತೆ ದಂಡೆಗೆ ಕರೆತರುವ ರೀತಿಯ ಅನುಭವ ನೀಡುತ್ತವೆ ಎಂದರು.
ಲೇಖಕಿ ಹಾಗೂ ಬೆಂಗಳೂರಿನ ಮನೋವಿಜ್ಞಾನಿ ಕಪಿಲಾ ಶ್ರೀಧರ್ ಮಾತನಾಡಿ, ನಮ್ಮಲ್ಲಿನ ಎಲ್ಲ ಅನುಭವಗಳನ್ನು ಅನುಭಾವವಾಗಿಸುವುದು ಸಾಹಿತ್ಯ. ಅದು ನಿಜವಾದ ಓದು ಅನುಭವಗಳನ್ನು ನಮ್ಮ ಬದುಕಿನ ಆಧಾರದ ಮೇಲೆ ಅನುಭಾವವಾಗಿಸುತ್ತದೆ ಎಂದರು.
ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಐಡಿಯಲ್ ಪಬ್ಲಿಕೇಶನ್ಸ್‌ನ ಎಂ.ಎಸ್.ಶಿವಪ್ರಕಾಶ್, ಲೇಖಕಿ ಶುಭಶ್ರೀ ಪ್ರಸಾದ್, ಭವಾನಿ ಲೋಕೇಶ್, ಪ್ರಸಾದ್, ನಿವೃತ್ತ ಪ್ರಾಂಶುಪಾಲೆ ಲೀಲಾ ಅಪ್ಪಾಜಿ ಉಪಸ್ಥಿತರಿದ್ದರು.
ಇದೇ ವೇಳೆ ಶುಭಶ್ರೀ ಪ್ರಸಾದ್ ಅವರ ಹೂ ದಂಡೆಯ ಬೇಲಿ ಕವನ ಸಂಕಲನ, ಮಂಜಿನ ಮಧುಪಾತ್ರೆ ಪ್ರವಾಸ ಕಥನ ಹಾಗೂ ಕಲ್ಲು ಹಾಸಿನ ಮೇಲೆ ತಕಧಿಮಿ ಎಂಬ ಲಲಿತ ಪ್ರಬಂಧ ಸಂಕಲನವನ್ನು ಲೋಕಾರ್ಪಣೆಗೊಳಿಸಲಾಯಿತು.