

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮನೆ ಮನೆಯಿಂದ ಕಸ ಸಂಗ್ರಹಿಸುವ ಪಾಲಿಕೆಯ ಆಟೋ ಟಿಪ್ಪರ್ ವಾಹನ ಚಾಲಕರ ಪಿಎಫ್ (ಭವಿಷ್ಯ ನಿಧಿ) ವಂತಿಗೆಯನ್ನು ಸ್ವಚ್ಛತೆ ಗುತ್ತಿಗೆ ಏಜೆನ್ಸಿಗಳು ಸಂಬಂಧಪಟ್ಟ ಇಲಾಖೆಗೆ ಭರಿಸದೆ ನಕಲಿ ದಾಖಲೆ ಸೃಷ್ಟಿಸಿರುವ ಬಗ್ಗೆ ಮಾಹಿತಿ ಇದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಶಾಸಕ ಪ್ರಸಾದ ಅಬ್ಬಯ್ಯ, ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹಾಗೂ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಅವರು, ಕೆಲ ಏಜನ್ಸಿಗಳು ದುಡ್ಡು ಮಾಡುವ ಏಜನ್ಸಿಗಳಾಗಿವೆ. ಕಳೆದ ಮೂರು ತಿಂಗಳಿಂದ ಗುತ್ತಿಗೆ ಪೌರ ಕಾರ್ವಿುಕರಿಗೆ ಸಂಬಳ ನೀಡದೇ ಮತ್ತು 8 ತಿಂಗಳಿಂದ ಪಿಎಫ್ ವಂತಿಗೆ ಭರಿಸದೆ ಅನ್ಯಾಯ ಮಾಡಲಾಗಿದೆ. ಪೌರ ಕಾರ್ವಿುಕರ ದುಡಿಮೆಯ ಹಣವನ್ನು ಏಜನ್ಸಿಗಳು ಕಬಳಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಆಟೋ ಟಿಪ್ಪರ್ ಚಾಲಕರಿಗೆ ಬಾಕಿ ಇರುವ ವೇತನವನ್ನು ಶೀಘ್ರವೇ ಪಾವತಿಸಬೇಕು. ಅವರ ಎಲ್ಲ ಬೇಡಿಕೆ ಈಡೇರಿಕೆಗೆ ಸರ್ಕಾರ ಬದ್ಧವಿದೆ. ಬಾಕಿ ಉಳಿದ ಹೊರ ಗುತ್ತಿಗೆ ಪೌರ ಕಾರ್ವಿುಕರ ನೇರ ನೇಮಕಾತಿ ಮತ್ತು ಕಾಯಂ ಮಾಡುವ ಕುರಿತು ಮುಖ್ಯಮಂತ್ರಿ ಜತೆ ರ್ಚಚಿಸಿ ಶೀಘ್ರವೇ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಪಾಲಿಕೆ ಸದಸ್ಯ ಶ್ರೀನಿವಾಸ ಬೆಳದಡಿ, ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಪಾಲಿಕೆ ಅಧಿಕಾರಿಗಳು, ಅಟೋ ಟಿಪ್ಪರ್ ಚಾಲಕರು ಇದ್ದರು.