ಕೊಡವ ಮಕ್ಕಡ ಕೂಟದ ೬೬ನೇ ಕೃತಿ ಬಿಡುಗಡೆ : ಓದುವ ಹವ್ಯಾಸ ಬದುಕಿಗೆ ಅರ್ಥ ಕಲ್ಪಿಸುತ್ತದೆ : ವೀಣಾ ಅಚ್ಚಯ್ಯ ಅಭಿಮತ

14MDK05
Published on

ಮಡಿಕೇರಿ:
ಓದುವ ಹವ್ಯಾಸ ಬದುಕಿಗೊಂದು ಅರ್ಥ ಕಲ್ಪಿಸುತ್ತದೆ, ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕರೆ ನೀಡಿದರು. ನಗರದ ಪತ್ರಿಕಾ ಭವನದಲ್ಲಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ರಚಿತ ಕೊಡವ ಕಾದಂಬರಿ, ಕೊಡವ ಮಕ್ಕಡ ಕೂಟದ ೬೬ನೇ ಕೃತಿ "ಬೇರ್" ಬಿಡುಗಡೆಗೊಳಿಸಿ ಬುಧವಾರ ಮಾತನಾಡಿದರು.

ಮನುಷ್ಯನ ಬದುಕು ಏನು ಎಂಬುದನ್ನು ಅರಿತುಕೊಳ್ಳಲು ಪುಸ್ತಕಗಳು ಸಹಕಾರಿಯಾಗಿದೆ. ಆದ್ದರಿಂದ ವಿದ್ಯಾರ್ಥಿ ಜೀವನದಿಂದಲೇ ಹೆಚ್ಚು ಪುಸ್ತಕಗಳನ್ನು ಓದುವಂತಾಗಬೇಕು, ಯುವಕ, ಯುವತಿಯರಿಗೆ ಮಾರ್ಗದರ್ಶನ ನೀಡುವಂತಹ ಪುಸ್ತಕಗಳು ಪ್ರಕಟಗೊಳ್ಳಬೇಕು. ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರು ಅನೇಕ ಉತ್ಸಾಹಿ ಸಾಹಿತಿಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಇಲ್ಲಿಯವರೆಗೆ ೬೬ ಪುಸ್ತಕಗಳನ್ನು ಹೊರ ತಂದಿರುವುದೇ ಇದಕ್ಕೆ ಸಾಕ್ಷಿಯಾಗಿದ್ದು, ಕೊಡಗಿನ ಸಾಹಿತ್ಯ ಕ್ಷೇತದ ಬೆಳವಣಿಗೆಯಲ್ಲಿ ಇವರ ಪಾತ್ರವೂ ಪ್ರಮುಖವಾಗಿದೆ ಎಂದು ಶ್ಲಾಘಿಸಿದರು.

ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಕೊಡಗಿನಲ್ಲಿ ಕೌಟುಂಬಿಕ ಸಂಸ್ಕೃತಿಯ ಕ್ರಾಂತಿ ಆಗಬೇಕು. ಇಂದಿನ ಪೀಳಿಗೆಗೆ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅರಿವು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ಹೆಚ್ಚು ಜಾಗೃತಗೊಳಿಸಬೇಕು. ಕೊಡಗಿನಲ್ಲಿ ಪುಸ್ತಕಗಳ ಮಾರಾಟವಾಗುತ್ತಿಲ್ಲ, ಜಿಲ್ಲೆಯಲ್ಲಿ ಒಂದೇ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ಲೇಖಕರ ಪುಸ್ತಕಗಳನ್ನು ಮಾರಾಟ ಮಾಡಲು ಮಳಿಗೆಯ ಅಗತ್ಯವಿದೆ ಎಂದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಮಾತನಾಡಿ, ಶರವೇಗದ ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಆಚಾರ, ವಿಚಾರ, ಕಲೆ, ಸಂಸ್ಕೃತಿಯನ್ನು ಬೆಳೆಸುವ ಕೆಲಸ ಆಗಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಬೇರ್ ಕೃತಿಯ ಲೇಖಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ಇಂದಿನ ಯುವ ಪೀಳಿಗೆ ತಂದೆ, ತಾಯಿಯ ಮಾತು ಕೇಳದೆ ನಮ್ಮ ಆಚಾರ, ವಿಚಾರವನ್ನು ಮರೆತು ನಮ್ಮದಲ್ಲದ ಸಂಸ್ಕೃತಿಯನ್ನು ಅನುಸರಿಸಿದಾಗ ಆಗುವ ಕಷ್ಟ, ನಷ್ಟ, ತಂದೆ, ತಾಯಿಯ ಸಂಕಟವನ್ನು ಬೇರ್ ಪುಸ್ತಕದಲ್ಲಿ ಮನೋಜ್ಞವಾಗಿ ವಿವರಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಬಗ್ಗೆ ಕಾಳಜಿ, ಭಾಷೆ, ಸಂಸ್ಕೃತಿ, ಸಾಹಿತ್ಯದ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ಕೂಟವು ನಿರಂತರವಾಗಿ ಪುಸ್ತಕಗಳನ್ನು  ಬಿಡುಗಡೆ ಮಾಡುತ್ತಾ ಬಂದಿದೆ ಎಂದರು. ಚೆಟ್ಟಳ್ಳಿಯ ಅವರ್ ಕ್ಲಬ್ ಅಧ್ಯಕ್ಷೆ ಐಚೆಟ್ಟಿರ ಸುನಿತಾ ಮಾಚಯ್ಯ  ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net