ಕಾವ್ಯ ಸೃಷ್ಟಿ ಅತ್ಯಂತ ಸೂಕ್ಷ್ಮ ಮತ್ತು ಅದೊಂದು ತಪಸ್ಸು

26spt1
Published on

ಸೋಮವಾರಪೇಟೆ : ಕಾವ್ಯ ಸೃಷ್ಟಿ ಎಂಬುದು ಒಂದು ಸೂಕ್ಷ್ಮ ತಪಸ್ಸು ಎಂದು ಸಾಹಿತಿ ಮತ್ತು ಜಾನಪದ ವಿದ್ವಾಂಸ ಡಾ.ಬೆಸೂರು ಮೋಹನ್ ಪಾಳೇಗಾರ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಸೋಮವಾರಪೇಟೆ ಘಟಕ, ಮಹಿಳಾ ಸಹಕಾರ ಸಂಘ, ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘ, ಅಕ್ಕನ ಬಳಗದ ಆಶ್ರಯದಲ್ಲಿ ಮಹಿಳಾ ಸಮಾಜದಲ್ಲಿ ಭಾನುವಾರ ನಡೆದ ಹಿರಿಯ ಸಾಹಿತಿ ಜಲಜಾ ಶೇಖರ್ ಅವರ ಕನ್ನಡಿಯ ಪ್ರತಿಬಿಂಬ ಕವನ ಸಂಕಲನ ಮತ್ತು ದೂರದ ತೀರ ಯಾನ ಪ್ರವಾಸ ಕಥನ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕಾವ್ಯ ಬರೆಯುವವರು ತಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸುವಲ್ಲಿ ಸ್ವಾತಂತ್ರ್ಯ ಹೊಂದಿದ್ದರೂ ವಿಮರ್ಶಕರು ಅದನ್ನು ಸಮಾಜದ ದೃಷ್ಟಿಯಿಂದ ಪರಿಶೀಲಿಸುವ ಹೊಣೆಗಾರಿಕೆ ಹೊಂದಿರುತ್ತಾರೆ. ಕೃತಿ ಮತ್ತು ಕಾವ್ಯವನ್ನು ವಿಮರ್ಶೆಯ ಹೆಸರಿನಲ್ಲಿ ವಿಪರೀತ ಟೀಕೆ ಮಾಡಿದರೆ, ಒಬ್ಬ ಸಾಹಿತಿ ಮತ್ತು ಕವಿ, ಸಾಹಿತ್ಯ ಕೃಷಿಯನ್ನೇ ತ್ಯಜಿಸುವ ಸಂಭವಿರುತ್ತದೆ. ಪ್ರತಿಯೊಬ್ಬರೂ ಅವರ ಭಾಷಾ ಜ್ಞಾನಕ್ಕೆ ಅನುಗುಣವಾಗಿ ಬರೆದ ಕೃತಿ ಓದುಗನಿಗೆ ಅರ್ಥವಾದರೆ ಸಾಕು ಎಂದು ಅಭಿಪ್ರಾಯಿಸಿದರು.

ಕಾವ್ಯ ಜನರ ಹೃದಯವನ್ನು ತಟ್ಟಿದರೆ ಅದು ಸಾರ್ಥಕವಾಗುತ್ತದೆ. ಲೇಖಕನಿಗೆ ಇಡೀ ಸಮಾಜವನ್ನು ಮೆಚ್ಚಿಸಲು ಸಾಧ್ಯವಿಲ್ಲ. ಕನ್ನಡ ಭಾಷೆಯ ಕಾವ್ಯ ಮತ್ತು ಸಾಹಿತ್ಯವನ್ನು ಬೇರೆ ಭಾಷೆಗಳಿಗೆ ತರ್ಜುಮೆ ಮಾಡಲು ಬಹಳಷ್ಟು ಕಷ್ಟವಾಗುತ್ತದೆ. ಕಾವ್ಯ ಸೃಷ್ಟಿಗೆ ಸಾವಿಲ್ಲ. ಓದುಗರು ಇಲ್ಲದಿದ್ದರೂ ಸಾಹಿತಿಗಳು ಬರೆಯುವುದನ್ನು ನಿಲ್ಲಿಸುವುದಿಲ್ಲ. ಇದು ಕನ್ನಡ ಸಾಹಿತ್ಯದ ಶಕ್ತಿ ಎಂದು ಡಾ.ಬೆಸೂರು ಮೋಹನ್ ಅಭಿಪ್ರಾಯಿಸಿದರು.

ಸಾಹಿತಿ ಜಲಜಾ ಶೇಖರ್ ಅವರ ಕೃತಿಗಳನ್ನು ಓದುವಾಗ ಲೇಖಕರ ಒಳನೋಟ, ಭಾವ ಜಗತ್ತು, ಬರವಣಿಗೆಯ ವಿಭಿನ್ನಶೈಲಿ, ಭಾಷಾ ವಿನ್ಯಾಸ, ವಿಷಯ ವೈವಿಧ್ಯತೆ ರುಚಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕನ್ನಡ ಭಾಷಾ ಬೆಳವಣಿಗೆಯಲ್ಲಿ ಶಿಕ್ಷಕರಾಗಿ, ಸಾಹಿತಿಯಾಗಿ ಜಲಜಾ ಶೇಖರ್ ತಮ್ಮ ಕೊಡುಗೆ ನೀಡಿದ್ದಾರೆ. ಈಗಾಗಲೇ ಏಳು ಕೃತಿಗಳನ್ನು ಪ್ರಕಟಿಸಿದ್ದಾರೆ.ಅವರ ಕನ್ನಡ ಸಾಹಿತ್ಯ ಸೇವೆ ಮುಂದುವರಿಯಲಿ ಎಂದು ಹಾರೈಸಿದರು.

ಕಸಾಪ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಅಕ್ಷಯ ಪತ್ತಿನ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಬೇಬಿ ಚಂದ್ರಹಾಸ್, ಅಕ್ಕನ ಬಳಗ ಅಧ್ಯಕ್ಷೆ ಗೀತಾ ರಾಜು, ಕಸಾಪ ಮಾಜಿ ಅಧ್ಯಕ್ಷರಾದ ಜೆ.ಸಿ.ಶೇಖರ್, ಎಚ್.ಜೆ. ಜವರಪ್ಪ, ಲೇಖಕಿ ಜಲಜಾ, ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಆಶಾ, ಕಸಾಪ ಗೌರವ ಕಾರ್ಯದರ್ಶಿಗಳಾದ ಜ್ಯೋತಿ ಅರುಣ್, ಎ.ಪಿ.ವೀರರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net