ಕೊಡವ ಮಕ್ಕಡ ಕೂಟದ 119ನೇ ಪುಸ್ತಕ ಬಿಡುಗಡೆ

book
Published on

ಮಡಿಕೇರಿ:

ಸಾಮಾಜಿಕ ಜಾಲತಾಣಗಳೇ ಹೆಚ್ಚು ಪ್ರಭಾವ ಬೀರುತ್ತಿರುವ ಇಂದಿನ ದಿನಗಳಲ್ಲಿ ಪುಸ್ತಕಗಳನ್ನು ಓದುವವರ ಸಂಖ್ಯೆ ಬಹಳ ವಿರಳ ಎನ್ನುವ ಮಾತಿದೆ. ಆದರೆ ಪ್ರಪಂಚಕ್ಕೆ ಬರವಣಿಗೆ ನೀಡುವ ಅಮೂಲ್ಯವಾದ ಸಾರವನ್ನು ಎಐ ಅಥವಾ ಗೂಗಲ್ ತಂತ್ರಜ್ಞಾನ ನೀಡಲು ಸಾಧ್ಯವಿಲ್ಲವೆಂದು ಸಾಹಿತಿ ಹಾಗೂ ಸಮಾಜ ಸೇವಕಿ ಮಾಳೇಟಿರ ಸೀತಮ್ಮ ವಿವೇಕ್ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಲೇಖಕಿ ಕೊಟ್ಟಂಗಡ ಕವಿತಾ ವಾಸುದೇವ ರಚಿಸಿರುವ ಕೊಡವ ಮಕ್ಕಡ ಕೂಟದ 119ನೇ ಪುಸ್ತಕ ಬಯಂದ ಬಾಳ್ ಕೊಡವ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಯಾವುದೇ ನಿರೀಕ್ಷೆಗಳಿಲ್ಲದೆ ಸಾಹಿತ್ಯವನ್ನು ಸಮಾಜಕ್ಕೆ ಧಾರೆ ಎರೆಯಬೇಕು, ಆಗ ಸಮಾಜ ಅದನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸುತ್ತದೆ. ಸಮಾಜವನ್ನು ಬದಲಾಯಿಸುವ ಶಕ್ತಿ ಸಾಹಿತ್ಯಕ್ಕಿದೆ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ವೈಯಕ್ತಿಕ ಭಾವಗಳಿರುತ್ತವೆ. ಬರಹಗಾರರು ಅದಕ್ಕೆ ಅಕ್ಷರದ ರೂಪ ನೀಡಿ ಪುಸ್ತಕವನ್ನಾಗಿ ಹೊರ ತರುತ್ತಾರೆ. ಮೌಲ್ಯಯುತವಾದ ಪುಸ್ತಕಗಳನ್ನು ಓದುವ ಸಾಹಿತ್ಯಾಸಕ್ತರು ಸಮಾಜದಲ್ಲಿ ಇನ್ನೂ ಇದ್ದಾರೆ. ಆದ್ದರಿಂದ ಬರಹಗಾರರು ಮತ್ತಷ್ಟು ಬೆಳೆಯಬೇಕು.

ವಿಶಿಷ್ಟ ಸಂಸ್ಕೃತಿ ಹೊಂದಿರುವ ಕೊಡಗಿನ ಆಚಾರ, ವಿಚಾರ, ಪರಂಪರೆ ಇಂದಿಗೂ ಜೀವಂತವಾಗಿರಲು ಸಾಹಿತ್ಯವೇ ಕಾರಣವಾಗಿದೆ. ಪುಸ್ತಕದ ರೂಪದಲ್ಲಿ ಅಪರೂಪದ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುತ್ತಿರುವುದು ಶ್ಲಾಘನೀಯ. ಖ್ಯಾತ ಸಾಹಿತಿ ಸಾಯಿಸುತೆಯವರ ಅಭಿಮಾನಿಯಾಗಿರುವ ಲೇಖಕಿ ಕೊಟ್ಟಂಗಡ ಕವಿತಾ ವಾಸುದೇವ ರಚಿಸಿರುವ ಬಯಂದ ಬಾಳ್ ಕಾದಂಬರಿ ನನ್ನನ್ನು ಹೆಚ್ಚು ಕಾಡಿತು. ದಾಖಲೆಯ 119 ಪುಸ್ತಕಗಳನ್ನು ಹೊರ ತರುವ ಮೂಲಕ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ ಎಂದು ಹೇಳಿದರು.

ಬಯಂದ ಬಾಳ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಸುಂಟಿಕೊಪ್ಪ ಕೊಡವ ಸಮಾಜದ ಕಾರ್ಯದರ್ಶಿ ಅಜ್ಜಿಕುಟ್ಟೀರ ಸಿ. ಗಿರೀಶ್ ಮಾತನಾಡಿ ಯುವ ಬರಹಗಾರರು ಪುಸ್ತಕ ರಚನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಯುವ ಸಾಹಿತಿಗಳಿಗೆ ಪ್ರೋತ್ಸಾಹದ ಅಗತ್ಯವಿದೆ, ಯುವ ಸಮೂಹ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಕೂಟದ ಮೂಲಕ 2024ನೇ ಇಸವಿಯಲ್ಲಿ 27 ಮತ್ತು 2025ರಲ್ಲಿ ಜನವರಿಯಿಂದ ಇಲ್ಲಿಯವರೆಗೆ ಸುಮಾರು 13 ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗಿದೆ. ಇನ್ನೂ ಹಲವು ಪುಸ್ತಕಗಳು ಮುದ್ರಣ ಹಂತದಲ್ಲಿವೆ. ಸರ್ಕಾರದ ಅನುದಾನವಿಲ್ಲದೆ ಅತೀ ಹೆಚ್ಚು ಪುಸ್ತಕ ಪ್ರಕಟಿಸಿದ ಹೆಗ್ಗಳಿಕೆ ನಮ್ಮದು. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯ, ಸಂಸ್ಕೃತಿ, ಸಾಹಿತ್ಯದ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ಜಿಲ್ಲೆಯ ಬರಹಗಾರರು ಬರೆದ ಕೊಡವ, ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಕೃತಿಗಳನ್ನು ಬಿಡುಗಡೆ ಮಾಡಿದೆ. ಇದೀಗ 119ನೇ ಪುಸ್ತಕ "ಬಯಂದ ಬಾಳ್" ಕೊಡವ ಕೃತಿಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಯಾವುದೇ ಪುಸ್ತಕವನ್ನು ಮಾರಾಟ ಮಾಡದೆ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಓದುಗರಿಗೆ ಉಚಿತವಾಗಿ ನೀಡಲಾಗಿದೆ ಎಂದರು.

ಸಮಾಜ ಸೇವಕ ಅವರೆಮಾದಂಡ ಶರಣ್ ಪೂಣಚ್ಚ ಮಾತನಾಡಿ ಡಿಜಿಟಲ್ ಯುಗದ ಈ ದಿನಗಳಲ್ಲಿ ಬರಹಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಪುಸ್ತಕಗಳು ಶಾಶ್ವತವಾಗಿ ಉಳಿಯುವುದರಿಂದ ಮುಂದಿನ ಪೀಳಿಗೆಗೆ ಸಾಹಿತ್ಯ ಕ್ಷೇತ್ರ ಹೆಚ್ಚು ಸಹಕಾರಿಯಾಗಿದೆ. ಆದ್ದರಿಂದ ಸಾಹಿತ್ಯಾಸಕ್ತರು ಹಾಗೂ ಬರಹಗಾರರು ಹೆಚ್ಚಾಗಬೇಕು. ಕೊಡವ ಮಕ್ಕಡ ಕೂಟ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೂಟದ ಕಾರ್ಯಚಟುವಟಿಕೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ಬಯಂದ ಬಾಳ್ ಕೊಡವ ಕೃತಿಯ ಲೇಖಕಿ ಕೊಟ್ಟಂಗಡ ಕವಿತಾ ವಾಸುದೇವ ಮಾತನಾಡಿ ಇದು ನನ್ನ 3ನೇ ಕಾದಂಬರಿಯಾಗಿದ್ದು, ನಮ್ಮಂಥ ಸಣ್ಣ ಬರಹಗಾರರಿಗೆ ಓದುಗರ ಪ್ರೋತ್ಸಾಹದ ಅಗತ್ಯವಿದೆ. ಕೊಡವ ಮಕ್ಕಡ ಕೂಟ ಹಾಗೂ ದಾನಿಗಳ ಸಹಕಾರವನ್ನು ಇದೇ ಸಂದರ್ಭ ಸ್ಮರಿಸಿಕೊಂಡರು.

ಸಮಾಜ ಸೇವಕÀ ಚೀಯಕಪೂವಂಡ ಸಚಿನ್ ಪೂವಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net