ಇಂಥದ್ದೊಂದು ಪುಸ್ತಕ ನಾನು ಓದಿಲ್ಲ ; ಪತ್ರಕರ್ತ, ಸಾಹಿತಿ ಜೋಗಿ ಹೇಳಿಕೆ ; ಬಿಳಿಗೆರೆ ಕೃಷ್ಣಮೂರ್ತಿ ಅವರ ‘ಛೂಮಂತ್ರಯ್ಯನ ಕಥೆಗಳು’ ಬಿಡುಗಡೆ

11 HULIYAR 1
Published on

ಹುಳಿಯಾರು: ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಅವರ ಛೂಮಂತ್ರಯ್ಯನ ಕಥೆಗಳು ಪುಸ್ತಕದ ಬೆನ್ನುಡಿಯಲ್ಲಿ ಪತ್ರಕರ್ತ ನಾಗೇಶ್ ಹೆಗಡೆಯವರು ಇಂಥದ್ದೊಂದು ಪುಸ್ತಕವನ್ನು ಇದುವರೆಗೂ ನಾನು ಓದಿರಲಿಲ್ಲ ಎಂದು ಬರೆದಿದ್ದರು. ಹಾಗಾಗಿ ಆಶ್ಚರ್ಯ, ಕುತೂಹಲ ಹಾಗೂ ಅನುಮಾನದಿಂದ ಈ ಪುಸ್ತಕ ಓದಿದೆ. ಓದಿದ ಮೇಲೆ ನನಗನ್ನಿಸಿದ್ದು ನಾನೂ ಕೂಡ ಇಂಥದ್ದೊಂದು ಪುಸ್ತಕವನ್ನು ಓದಿರಲಿಲ್ವಲ್ಲ ಎಂದು. ಅಷ್ಟರಮಟ್ಟಿಗೆ ಲೇಖಕರು ಪುಸ್ತಕದಲ್ಲಿ ಕೃಷಿಲೋಕದ ವಾಸ್ತವವನ್ನು ಕತೆಗಳ ಮೂಲಕ ರಸವತ್ತಾಗಿ ಹೇಳಿದ್ದಾರೆ ಎಂದು ಪತ್ರಕರ್ತ, ಸಾಹಿತಿ ಜೋಗಿ ಅಭಿಪ್ರಾಯಪಟ್ಟರು.

ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಪ್ರಖ್ಯಾತ ಪ್ರಕಾಶನ ಸಂಸ್ಥೆಯಾದ ಬೆಂಗಳೂರಿನ ಬಹುರೂಪಿ ಪ್ರಕಾಶನದ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಅವರ ಛೂಮಂತ್ರಯ್ಯನ ಕಥೆಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಈ ಪುಸ್ತಕದಲ್ಲಿ ಓದುಗರಲ್ಲಿ ಆಸಕ್ತಿ ಹುಟ್ಟಿಸುವ ಪ್ರೀತಿ, ಪ್ರೇಮ ಅಥವಾ ಪತ್ತೆದಾರಿ ಕತೆಯಿಲ್ಲ. ಜಗತ್ತಿನಲ್ಲಿ ಇಲ್ಲದಂತಹ, ಇರಬೇಕಾದ ಛೂಮಂತ್ರಯ್ಯನ ಪಾತ್ರವನ್ನು ಲೇಖಕರು ಸೃಷ್ಟಿಸಿ ಬದುಕಿನ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ಕೃಷಿ ಅನುಭವವನ್ನು ಹೇಳುತ್ತಾ ಹೋಗಿದ್ದಾರೆ. ಆದಿ ಮಾನವನ ಜ್ಞಾನ ಮತ್ತು ವಿಜ್ಞಾನದ ಅರಿವಿನೊಂದಿಗೆ ವೈಜ್ಞಾನಿಕ ಹಾದಿಯನ್ನು ಲೇಖಕರು ತೋರಿಸಿಕೊಟ್ಟಿದ್ದಾರೆ ಎಂದರಲ್ಲದೆ ಲೆಕ್ಕಾಚಾರದಲ್ಲಿ ಬದುಕಲಿಕ್ಕಾಗುವುದಿಲ್ಲ ಎನ್ನುವುದನ್ನು ಛೂಮಂತ್ರಯ್ಯ ಹೇಳಿದ್ದಾರೆ.

ಸಂತೋಷದ ಮೂಲವನ್ನು ಹುಡುಕುವ ಕೆಲಸವನ್ನು ಪುಸ್ತಕಗಳು ಮಾಡಲು ಸಾಧ್ಯವಾದರೆ ಅದು ಛೂಮಂತ್ರಯ್ಯನ ಕಥೆಗಳಂತಹ ಪುಸ್ತಕಗಳಿಂದ ಸಾಧ್ಯ ಎಂದು ಪುಸ್ತಕದ ಬಗ್ಗೆ ಮಾತನಾಡಿದರು. ಬಹುರೂಪಿ ಪ್ರಕಾಶನದ ಪ್ರಕಾಶಕ ಜಿ.ಎನ್.ಮೋಹನ್ ಮಾತನಾಡಿ, ಛೂಮಂತ್ರಯ್ಯನ ಕಥೆಗಳು ಪುಸ್ತಕದ ಒಳಗಿರುವ ವಿಚಾರ ಮತ್ತು ನೋಟಗಳು ಓದುಗರಲ್ಲಿ ಆತ್ಮವಿಶ್ವಾಸ ಕೊಡುತ್ತದೆ. ಓದುಗರ ಬದುಕಲ್ಲಿ ಹೊಸ ಬೆಳಕನ್ನು ಕೊಡುತ್ತದೆ. ಬಹುಮುಖ್ಯವಾಗಿ ಮೊಬೈಲ್‌ನಲ್ಲಿ ಕಳೆದುಹೋಗಿರುವ ಹದಿಹರೆಯದವರ ಕೈಗೆ ಇಂತಹ ಪುಸ್ತಕಗಳನ್ನು ಕೊಡಬೇಕೆನ್ನುವಷ್ಟರ ಮಟ್ಟಿಗೆ ಇಷ್ಟವಾಗುತ್ತದೆ. ಕೃಷಿ ಮೇಲೆ ಪ್ರೀತಿಯುಳ್ಳವರು ಈ ಪುಸ್ತಕ ಓದಿದರೆ ಕೃಷಿಯ ಜೊತೆ ಪುಸ್ತಕ ಪ್ರೀತಿಯನ್ನೂ ಬೆಳೆಸಿಕೊಳ್ಳುತ್ತಾರೆ. ಈ ಕೃತಿಯನ್ನು ಓದಿ ನಾನು ನಿಜಕ್ಕೂ ನಿಬ್ಬೆರಗಾಗಿದ್ದು ಒಬ್ಬ ಓದುಗನಾಗಿ ಹೇಳುವುದೇನೆಂದರೆ ಪ್ರತಿಯೊಬ್ಬರೂ ಈ ಪುಸ್ತಕವನ್ನು ಓದಲೇಬೇಕು ಎಂದರು.

ಲೇಖಕ ಬೆಳಗುಲಿ ಶಶಿಭೂಷಣ್ ಅವರು ಮಾತನಾಡಿ, ಛೂಮಂತ್ರಯ್ಯನ ಕಥೆೆಗಳು ಪುಸ್ತಕದಲ್ಲಿರುವ ಅಷ್ಟೂ ಕಥೆಗಳೂ ಕೃಷಿ ಚಿಂತಕ ಶಿವನಂಜಯ್ಯ ಬಾಳೇಕಾಯಿ ಹಾಗೂ ಕವಿ ಬಿಳಿಗೆರೆ ಕೃಷ್ಣಮೂರ್ತಿ ಅವರ ಸುತ್ತ ಹೆಣೆದ ಅವರು ಹೇಳಿದ ಮಾತುಗಳೇ ಕಥೆೆಗಳಾಗಿ ರೂಪುಗೊಂಡಿವೆ ಎಂದರಲ್ಲದೆ ಇದರಲ್ಲಿರುವುದು ಸಂಪೂರ್ಣ ಹಳ್ಳಿಗಳ ಕೃಷಿ ಸಂಬಂಧ ಕಥೆಗಳಾಗಿದ್ದು ಕೃಷಿ ಸಮಸ್ಯೆಗೆ ಕಾರಣಗಳೇನು, ಅದಕ್ಕೆ ಪರಿಹಾರವೇನು ಎಂಬುದಕ್ಕೆ ಪುಸ್ತಕ ಉತ್ತರ ಕೊಡುತ್ತದೆ. ಹಾಗಾಗಿ ಕೃಷಿ ಜತೆ ತೊಡಗಿಸಿಕೊಂಡಿರುವವರು ಕಡ್ಡಾಯವಾಗಿ ಈ ಪುಸ್ತಕವನ್ನು ಓದಲೇಬೇಕಿದೆ. ಎಲ್ಲೂ ಬೋರ್ ಹೊಡೆಸದೆ ಚಿಕ್ಕದಾಗ ಚೊಕ್ಕದಾಗಿ ಒಂದು ವಿಚಾರವನ್ನು ಕಥನದ ಮೂಲಕ ಹೇಳುವ ಕ್ರಮ ಕನ್ನಡದ ಮಟ್ಟಿಗೆ ಹೊಸದು ಎಂದರು.

ಅನ್ವೇಷಣೆ ಸಂಪಾದಕ ಆರ್.ಜಿ. ಹಳ್ಳಿ ನಾಗರಾಜ್ ಮಾತನಾಡಿ, ಪುಸ್ತಕಗಳು ನಮ್ಮ ಬದುಕನ್ನು, ಸಂಸ್ಕೃತಿಯನ್ನು ಬೆಳೆಸುತ್ತದೆ. ಅದರಂತೆ ಛೂಮಂತ್ರಯ್ಯನ ಕಥೆಗಳನ್ನು ಓದಿದ ನನಗೆ ಮತ್ತೆ ನನ್ನ ಹಳ್ಳಿಗೆ ಹೋಗಬೇಕೆನ್ನಿಸಿತು. ಈ ಪುಸ್ತಕದಲ್ಲಿ ಪ್ರಕೃತಿಗೆ ಸಂಬಂಧ ಪಟ್ಟ ಕೀಟಗಳು, ಹಕ್ಕಿಪಕ್ಷಿಗಳು ಮರಗಿಡಗಳು ಪರಿಚಯ ಮತ್ತು ಪ್ರಕೃತಿ ಜತೆಗಿನ ನಂಟನ್ನು ವಿವರಿಸಿದ್ದಾರೆ. ಯುವ ಜನತೆಗೆ ಪ್ರಕೃತಿಯನ್ನು ಹೇಗೆ ನೋಡಬೇಕೆನ್ನುವ ದೃಷ್ಟಿಕೋನವನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಕೃಷಿ ಚಿಂತಕ ಶಿವನಂಜಯ್ಯಬಾಳೇಕಾಯಿ, ಪುಸ್ತಕದ ಲೇಖಕ ಬಿಳಿಗೆರೆ ಕೃಷ್ಣಮೂರ್ತಿ, ಪ್ರಾಚಾರ್ಯ ಕೃಷ್ಣಮೂರ್ತಿ, ಕಥೆೆಗಾರ ಗಂಗಾಧರಯ್ಯ, ಕಂಟಲಗೆರೆ ಗುರುಪ್ರಸಾದ್, ರಂಗನಿರ್ದೇಶಕ ತಿಪಟೂರು ಸತೀಶ್, ಬೆಂಗಳೂರು ಉಮೇಶ್, ಶಿಕ್ಷಕರಾದ ದಯಾನಂದ್, ಶ್ರೀಧರ್, ನಾರಾಯಣಪ್ಪ, ಸೇರಿ ಕಾಲೇಜಿನ ಭೋದಕವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net